ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಿ
ಗದಗ: ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮೀಣ ಬ್ಯಾಂಕ್ಗಳ ಸೌಲಭ್ಯಗಳನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕೆಂದು ಅರುಣ ಅಣ್ಣಿಗೇರಿ ಹೇಳಿದರು. ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಈಚೆಗೆ ಜರುಗಿದ ಸ್ಥಳೀಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಕಳೆದ 2 ವರ್ಷಗಳಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಈಚೆಗೆ ವರ್ಗಾವಣೆಗೊಂಡ ಟಿ.ಇ. ಸುರೇಂದ್ರ ಅವರನ್ನು ಸನ್ಮಾನಿಸಿ ಮಾತನಾಡಿದರು. ಇಲ್ಲಿನ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸಿಂಡಿಕೇಟ್ ಬ್ಯಾಂಕ್ ಪ್ರಾರಂಭವಾಗಿ ಸಾಕಷ್ಟು ಅನುಕೂಲವಾಗಿದೆ. ಸಾಲ ಹಾಗೂ ಇತರ ಸೌಲಭ್ಯಗಳನ್ನು ಪಡೆದ ಗ್ರಾಹಕರು ನಿಗದಿತ ಸಮಯಕ್ಕೆ ಮರುಪಾವತಿಸಿ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು. ಬ್ಯಾಂಕ್ ಸಿಬ್ಬಂದಿ ಪರಶುರಾಮ ಭಜಂತ್ರಿ, ಲಕ್ಷ್ಮಣ ದೊಡ್ಡಮನಿ, ಟಿ.ಇ. ಸುರೇಂದ್ರ ಮಾತನಾಡಿದರು. ಈರಪ್ಪ ಹೊಸಳ್ಳಿ, ಉಮೇಶ ಪೂಜಾರ, ಸುಭಾಶ ಕಟಗೇರಿ, ಆದಪ್ಪ ಕೇಲೂರ, ಹನುಮಂತ ತಳವಾರ ಇದ್ದರು.
ಗ್ರಾಮೀಣರಿಗೆ ಸೌಲಭ್ಯ: ದೊಡ್ಡಮನಿ
ಶಿರಹಟ್ಟಿ: ತಾಲೂಕಿನ ಗ್ರಾಮೀಣರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗೂ ಎಸ್ಸಿ ಕಾಲನಿ ಅಭಿವೃದ್ಧಿಗೆ ಸರ್ಕಾರ ಅನುದಾನ ಕಾಯ್ದಿರಿಸಿದ್ದು, ಹಂತ ಹಂತವಾಗಿ ಉಳಿದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶನಿವಾರ ತಾಲೂಕಿನ ರಣತೂರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಭೂಸೇನಾ ನಿಗಮದ ವತಿಯಿಂದ ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಮುಂಡರಗಿ ಮತ್ತು ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆಧ್ಯತೆ ನೀಡಿದೆ. ತಾಲೂಕಿನ ಬಗ್ರಾಮೀಣ ರಸ್ತೆಗಳು ಸಂಚರಿಸಲು ಬಾರದಷ್ಟು ಹದಗೆಟ್ಟು ಜನತೆ ಹಿಡಿಶಾಪ ಹಾಕುತ್ತಿದ್ದು, ಸುಧಾರಣೆಗೆ ಮುಂದಾಗುವುದಾಗಿ ತಿಳಿಸಿದರು.
ಗ್ರಾಮೀಣರಿಗೆ ಅಗತ್ಯವಿರುವ ರಸ್ತೆ ನಿರ್ಮಾಣ, ವಾಹನ ಸಂಚಾರ, ಬಸ್ ತಂಗುದಾಣ, ಆಸ್ಪತ್ರೆ, ಕೆರೆ, ಬ್ಯಾರೇಜ್, ವಸತಿ ರಹಿತರಿಗೆ ಆಶ್ರಯ ಮನೆ ಹೀಗೆ ನೆನೆಗುದಿಗೆ ಬಿದ್ದಿದ್ದ ಹತ್ತು ಹಲವು ಜನೋಪಯೋಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇನೆ. ಅವುಗಳಿಗೆ ಬೇಕಾದ ಅನುದಾನ ಸರ್ಕಾರದಿಂದ ಕೇಳಿ ಪಡೆದು ಕಾರ್ಯರೂಪಕ್ಕೆ ತಂದಿದ್ದೇನೆ. ನಿರ್ಲಕ್ಷ್ಯಕೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಕೆಲಸಗಳು ವೇಗದಲ್ಲಿ ನಡೆಯುವಂತೆ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಕಮಲವ್ವ ಪೂಜಾರ, ಮದನಲಾಲ ಬಾಫಣಾ, ನಿಂಗನಗೌಡ ಪಾಟೀಲ, ಹನುಮಂತಪ್ಪ ಗೋಪಾಳಿ, ಅರುಣ ಕಟಗಿ, ಮೌಲಾಸಾಬ ಮತ್ತೂರ, ಚಂದ್ರು ಸಂಗಮ್ಮನವರ ಮತ್ತಿತರರು ಇದ್ದರು.