ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ
ಗದಗ: ಅತ್ಯಾಚಾರ ಪ್ರಕರಣಗಳಿಂದ ರಾಜ್ಯದಲ್ಲಿ ಮಹಿಳೆಯರು ಮಕ್ಕಳು ಭಯಭೀತರಾಗಿದ್ದು, ಅಪರಾಧಿಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಶುಕ್ರವಾರ ಜೈ ಭೀಮ ಸೇನಾ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಗೆಳೆಯನ ಸಮ್ಮುಖದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಂಡನೀಯ. ಅತ್ಯಾಚಾರದಿಂದ ಮಹಿಳೆಯರು ಭಯಭೀತರಾಗಿದ್ದಾರೆ. ಅಲ್ಲದೇ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣ ನೆನಪಿಸುವ ರೀತಿಯ ಕರಾಳ ಘಟನೆ ಶುಕ್ರವಾರ ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಡೆದಿದೆ. ಈ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. 22 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ತನ್ನ ಗೆಳೆಯನ ಸಮ್ಮುಖದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಂಧಿಸಿ ಹಾಗೂ ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದೆ. ಘಟಕದ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪುರ, ಉಪಾಧ್ಯಕ್ಷ ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಜೋಸೆಫ, ಹೇಮಂತ ಹುಬ್ಬಳ್ಳಿ, ಶ್ರೀಕಾಂತ ರಾಮಗಿರಿ, ಬಸವರಾಜ ಬದಾಮಿ, ರಾಜು ಅಗಸಿನಕೊಪ್ಪ, ವಿಶ್ವನಾಥ ಹಾಳಕೇರಿ, ಮಂಜುನಾಥ ಪರಾಪುರ, ಮಲ್ಲಿಕಾರ್ಜುನ ಸಂಗಾಪುರ ಉಪಸ್ಥಿತರಿದ್ದರು.