ದೇಶಿ ಕ್ರೀಡೆ ಕುಸ್ತಿ ಪ್ರೋತ್ಸಾಹಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 22
ನಮ್ಮ ಯುವ ಜನಾಂಗ ವಿದೇಶ ಕ್ರೀಡೆಗೆ ಜೋತುಬಿದ್ದು, ನಮ್ಮ ಮೂಲ ದೇಶಿ ಕ್ರೀಡೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ. ಈ ಮಧ್ಯೆ 7 ವರ್ಷಗಳಿಂದ ದೇಶಿ ಕ್ರೀಡೆ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬರುತ್ತಿರುವ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಕಾರ್ಯ ಮೆಚ್ಚುವಂತದ್ದು. ನಶಿಸಿ ಹೋಗುತ್ತಿರುವ ದೇಶಿ ಕ್ರೀಡೆ ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರಹೇಳಿದರು.
ಅವರು ಮಂಗಳವಾರ ಬೆಳಗ್ಗೆ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕುಸ್ತಿ ಮೂಲತಃ ಗ್ರಾಮೀಣರ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ. ಕುಸ್ತಿಯಿಂದ ದೇಹದ ಬೆಳವಣಿಗೆ ಮತ್ತು ದೇಹ ಬಲಾಢ್ಯವಾಗಲು ಸಾಧ್ಯ. ಮುಂಡರಗಿ ಪಟ್ಟಣದ ಬಸೀರಾಬಾನು ವಕಾರದ್ ಹಾಗೂ ತಾಲೂಕಿನ ಮುಷ್ಟಿಕೊಪ್ಪ, ಮೇವುಂಡಿ, ಡಂಬಳ ಗ್ರಾಮಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಾಲೂಕಿನ ಕೀರ್ತಿ ಪತಾಕಿ ಹಾರಿಸಿದ್ದಾರೆ. ಹೆಚ್ಚೆಚ್ಚು ದೇಶಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಮುಂಡರಗಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಪಾದ ಜೆಲ್ದೆ ಮಾತನಾಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಅಂತಹ ಆರೋಗ್ಯ ಸಂಪತ್ತನ್ನು ಪಡೆಯಬೇಕಾದರೆ ಕುಸ್ತಿ ಆಟದಲ್ಲಿ ಭಾಗಿಯಾಗುವುದು ಅವಶ್ಯ. ಕ್ರಿಕೆಟ್ ಆಟಕ್ಕೆ ದಾಸರಾಗಿ ಇಂದು ದೇಶಿ ಕ್ರೀಡೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇಂದು ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜರುಗುತ್ತಿರುವ ಅತ್ಯಾಚಾರ ಹಾಗೂ ರೇಪ್ ಪ್ರಕರಣಗಳನ್ನು ಹಿಮ್ಮೆಟ್ಟಿಸಲು ಇಂತಹ ಕ್ರೀಡೆಗಳ ಆವಶ್ಯಕತೆ ಇದೆ. ವಿಶೇಷವಾಗಿ ಮಹಿಳೆಯರು ಕುಸ್ತಿ ಹಾಗೂ ಕರಾಟೆಯಲ್ಲಿ ಹೆಚ್ಚು ಆಸಕ್ತಿವಹಿಸಿ ಇವುಗಳ ತರಬೇತಿ ಪಡೆದುಕೊಳ್ಳುವುದು ಹೆಚ್ಚು ಸೂಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ರಾಂತ ಕ್ರೀಡಾಧಿಕಾರಿ ಪ್ರೊ. ಎ.ವೈ. ನವಲಗುಂದ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಭಾರತಿ ಹಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಂಕರಗೌಡ ಪಾಟೀಲ, ಸುರೇಶ ಮಾಳೆಕೊಪ್ಪ, ಈಶ್ವರಪ್ಪ ಉಪ್ಪಿನಬೆಟಗೇರಿ, ಯಮನಪ್ಪ ಭಜಂತ್ರಿ, ಅಂದಾನಗೌಡ ಕುಲಕರ್ಣಿ, ಕೊಟ್ರಗೌಡ ಪಾಟೀಲ, ಬಸಪ್ಪ ವಡ್ಡರ, ಕುರುವತೆಪ್ಪ ಅರಿಷಿನದ, ವೈ.ವೈ. ಉಪ್ಪಾರ, ಲಕ್ಕುಂಡಿಯ ಕುಸ್ತಿ ತರಬೇತುದಾರ ಶರಣಪ್ಪ ಬೆಲೇರಿ, ವೈ.ಎಚ್. ಬಚನಳ್ಳಿ, ಕಾಶೀನಾಥ ಶಿರಬಡಗಿ, ಎನ್.ಎಂ. ಕಲಕೇರಿ, ಪೈಲ್ವಾನರಾದ ಕಾಶೀಂಸಾಬ ಕೊಕ್ಕರಗುಂದಿ, ವಿರೂಪಾಕ್ಷಪ್ಪ ಅಸುಂಡಿ ಉಪಸ್ಥಿತರಿದ್ದರು. ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಗಳಿಂದ ಆಗಮಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕುಸ್ತಿ ಪಂದ್ಯಾವಳಿಗಳು ಜರುಗಿದವು.