ಇಂದು ಮಹಿಳಾ ಸಮಾವೇಶ, ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಗದಗ, ಜು. 23
ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗದಗ ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಗದಗ ಜಿಲ್ಲೆಯ ಪ್ರಗತಿಪರ ಮಹಿಳಾ ಸಂಘಟನೆಗಳ ಸಹಕಾರದೊಂದಿಗೆ ಜು. 24ರಂದು ಬೆಳಗ್ಗೆ 9ಕ್ಕೆ ನಗರದ ಗಂಗಾಪುರಪೇಟೆಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ.
ಅಂದು ಬೆಳಗ್ಗೆ 8.30ಕ್ಕೆ ನಗರದ ಮಹಾತ್ಮಾ ಗಾಂಧಿ ವೃತ್ತದ ಬಳಿ ಗದಗ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ ಅವರು ಮಹಿಳಾ ಜಾಗೃತಿ ರ್ಯಾಲಿಗೆ ಚಾಲನೆ ನೀಡುವರು. ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣ ಖಂಡಿಸಿ, ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕಾನೂನಿನ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಡೆಯುವ ಈ ರ್ಯಾಲಿಯು ಮಹಾತ್ಮಾ ಗಾಂಧಿ ವೃತ್ತದಿಂದ ಮಹೇಂದ್ರಕರ ವೃತ್ತ, ಬಸವೇಶ್ವರ ನಗರದ ಮಾರ್ಗವಾಗಿ ಗಂಗಾಪುರಪೇಟೆಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿರುವ ದುರ್ಗಾದೇವಿ ಸಮುದಾಯ ಭವನಕ್ಕೆ ತಲುಪಿ ಸಮಾವೇಶದ ಸಭೆಯಾಗಿ ಮಾರ್ಪಡುವುದು. ಕಾರ್ಯಕ್ರಮದ ನಂತರ ಸಭೆಯ ನಿರ್ಣಯಗಳೂ ಸೇರಿದಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಮಹಿಳಾ ಕವಿಗೋಷ್ಠಿ: ಸಮುದಾಯ ಭವನದಲ್ಲಿ 9.30ಕ್ಕೆ ನಡೆಯುವ ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಹಾಗೂ ಗದಗ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕವಿತಾ ದಂಡಿನ ವಹಿಸುವರು. ಮುಂಡರಗಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ಬಿಳಿಮೊಗ್ಗದ ಆಶಯ ಭಾಷಣ ಮಾಡುವರು. ಕವಿಗೋಷ್ಠಿಯಲ್ಲಿ ಮುಂಡರಗಿಯ ಪ್ರೊ. ಚೇತನಾ ಹೊಸಮಠ, ಬೆಟಗೇರಿಯ ಪ್ರಾ. ಯಶೋಧರಾ ಹಿರೇಗೌಡ್ರ, ಗದುಗಿನ ಪ್ರಾ. ಪ್ರೇಮಾ ಹಂದಿಗೋಳ, ವಿಜಯಲಕ್ಷ್ಮೀ ಹೊಳ್ಳಿಯವರ, ಮಂಜುಳಾ ವೆಂಕಟೇಶಯ್ಯ, ಜ್ಯೋತಿ ಗಡಾದ, ಶೋಭಾ ಪಿಡ್ಡಿ, ಮಂಜರಿ ಹೊಂಬಾಳಿ, ಶೋಭಾ ಜಕ್ಕನಗೌಡ್ರ, ಭಾಗ್ಯಲಕ್ಷ್ಮೀ ಕುಬೇರ ಅವರು ಸ್ವರಚಿತ ಕವನ ವಾಚಿಸುವರು.
ಸಂವಾದ: ಮಧ್ಯಾಹ್ನ 2ಕ್ಕೆ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಸುರಕ್ಷಿತಳೇ ವಿಷಯವಾಗಿ ನಡೆಯುವ ಪರ-ವಿರೋಧ ಸಂವಾದದಲ್ಲಿ ಗದುಗಿನ ವಕೀಲ ಸುಮಾ ಶ್ರೀಗಿರಿ, ರೋಣ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಡಾ. ಪ್ರಮೀಳಾ ಕೊರಧ್ಯಾನಮಠ, ಪ್ರೊ. ಬಿ.ಎನ್. ತಾರಾ, ರೋಣದ ಯಶಸ್ವಿನಿ ಮಹಿಳಾ ಸಹಾಯ ಹಾಗೂ ಸಾಂತ್ವನ ಕೇಂದ್ರದ ಅಧ್ಯಕ್ಷೆ ಕವಿತಾ ಹುಲ್ಲೂರ, ಗದಗ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ, ಸುವರ್ಣ ಲೇಡೀಜ್ ಕ್ಲಬ್ನ ಅಧ್ಯಕ್ಷೆ ಶೈಲಜಾ ಕವಲೂರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ನಿರ್ಮಲಾ ಪಾಟೀಲ, ಗದಗ ಎಸ್ಎಸ್ಕೆ ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾ ಬಾಕಳೆ ಅವರು ತಮ್ಮ ವಿಚಾರಗಳನ್ನು ಮಂಡಿಸುವರು.
ಉಪನ್ಯಾಸ: ಮಧ್ಯಾಹ್ನ 3ಕ್ಕೆ ಶಿರಹಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಪ್ರೊ. ಪ್ರಿಯಾಂಕ ನಡುವಿನಮನಿ ಅವರು ಮಹಿಳಾ ಸಬಲೀಕರಣ ವಿಷಯವಾಗಿ ಉಪನ್ಯಾಸ ನೀಡುವರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧನೆಗೈದ ಮಹಿಳಾ ಸಾಧಿಕರಾದ ಪ್ರೇಮಾ ಮೇಟಿ, ಅನ್ನಪೂರ್ಣಾ ವರವಿ ಅವರಿಗೆ ಸನ್ಮಾನ ನಡೆಯಲಿದೆ. ಸುಮಾ ಪಾಟೀಲ ನಿರ್ಣಯ ಮಂಡಿಸುವರು. ಸಮಾವೇಶದಲ್ಲಿ ಗದುಗಿನ ವಿಜಯ ಕಲಾಮಂದಿರದ ಪ್ರಾ. ಪ್ರೇಮಾ ಹಂದಿಗೋಳ ಅವರು ರಚಿಸಿದ ಚಿತ್ರಕಲಾ ಪ್ರದರ್ಶನ ಜರುಗಲಿದೆ ಎಂದು ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಹಾಗೂ ಗದಗ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕವಿತಾ ದಂಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.