ಬ್ಯಾಂಕ್ ಅಧಿಕಾರಿಗೆ ರೈತ ಸಂಘ ಘೇರಾವ್
ನರಗುಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಎಸ್ಬಿಐನಿಂದ ಸಾಲ ಪಡೆದ ರೈತರಿಗೆ ಬ್ಯಾಂಕ್ ಅಧಿಕಾರಿಗಳು ವರ್ಷದ ಮಧ್ಯದಲ್ಲಿಯೇ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿರುವುದನ್ನು ಖಂಡಿಸಿ ಬುಧವಾರ ರೈತ ಸಂಘಧ ಪದಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಇತರರು ಸರ್ಕಾರವೇ ರೈತರ ಸಾಲ ವಸೂಲಾತಿ ಮಾಡದಂತೆ ಸೂಚನೆ ನೀಡಿದೆ. ಆದರೆ, ಇಲ್ಲಿನ ಬ್ಯಾಂಕ್ ಅಧಿಕಾರಿಗಳು ಮಾತ್ರ ಅದನ್ನು ಕಡೆಗಣಿಸಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಎಸ್.ಎಚ್. ಪಾಟೀಲ, ವಿ.ವಿ. ಕಲ್ಲೂರ, ಎಸ್.ಎಸ್. ಪಾಟೀಲ, ಎಸ್.ಎಲ್. ಅಸೂಟಿ, ಸಿ.ಜಿ.ನಂದಿ, ಎಸ್.ಎಂ. ಪಾಟೀಲ, ಎ.ವಿ. ಮೇಗೂರ, ವಿ.ಡಿ. ಹಳಕಟ್ಟಿ, ಎಸ್.ವಿ. ಕೋಲಕಾರ, ಶಂಕರಗೌಡ ಅಸೂಟಿ, ಹನಮಂತ ಮುಂದಿನಮನಿ, ಯಲ್ಲಪ್ಪ ನವಲಗುಂದ ಇದ್ದರು.