ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಗೀತದ ಮೂಲನೆಲೆ ಕನ್ನಡ ಜಾನಪದ: ಸಿದ್ದಣ್ಣ

Lingaraj Badiger
Updated On : 24 Jul 2014, 11:48 am

ಗದಗ: ಸಂಗೀತದ ಮೂಲ ನೆಲೆಯ ಕನ್ನಡದ ಜಾನಪದವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷ ಡಾ. ಸಿದ್ದಣ್ಣ ಜಕಬಾಳ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗದುಗಿನ ವಿವಿಧ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ದೊಡ್ಡಾಟ ಸಂಶೋಧನೆ, ತರಬೇತಿ ಸಂಸ್ಥೆಯ ಗ್ರಾಮರಂಗದವರು ಸಂಘಟಿಸಿದ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರದಲ್ಲಿ ಬಯಲಾಟದ ಹಾಡುಗಾರಿಕೆಯ ವೈವಿಧ್ಯತೆ ಕುರಿತು ಉಪನ್ಯಾಸ ನೀಡಿದರು.
ದೇಸಿ ಹಾಡುಗಾರಿಕೆಯು ಕಪ್ಪೆ ಅರಭಟನ ಶಾಸನದಲ್ಲಿಯೇ ಉಲ್ಲೇಖವಾಗಿದೆ. ಶಾಸ್ತ್ರೀಯ ಸಂಗೀತಕ್ಕೆ ಅನೇಕ ರಾಗಗಳನ್ನು ರಚಿಸಲು ಪ್ರೇರಣೆ ನೀಡಿದ ಕ್ಷೇತ್ರವೆಂದರೆ ಅದು ಕನ್ನಡದ ಜಾನಪದ ಕ್ಷೇತ್ರ ಕನ್ನಡಿಗರ ಸಾಂಸ್ಕೃತಿಕ ಕಲೆಯಾದ ದೊಡ್ಡಾಟವು ನವರಸಗಳಿಂದ ಕೂಡಿದ್ದು, ಗ್ರಾಮೀಣ ಜನರ ಆಡುಮಾತಿನ ಕಲೆಯಾಗಿದೆ. ಅದರಲ್ಲಿಯೂ ರೌದ್ರ ಮತ್ತು ವೀರ ರಸವೇ ಮುಖ್ಯವಾದದ್ದಾಗಿದೆ. ಭಾರತದ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರವಾದದ್ದು, ಜಾನಪದರು ಯಾವುದೇ ರಾಜಾಶ್ರಯ ಬಯಸದೇ ತಮ್ಮ ಬೆವರಿನ ಬಂಡವಾಳವನ್ನು ಸುರಿದು ಅನೇಕ ಪ್ರಕಾರಗಳನ್ನು ಉಳಿಸಿ-ಬೆಳೆಸಿಕೊಂಡು ಬಂದಿದ್ದಾರೆ. ಒಂದು ಕಡೆ ರಾಜಾಶ್ರಯದ ನೆರವು ಪಡೆದು ಬೆಳೆದ ಶಿಷ್ಠ ಕಲೆಗಳೆ ಶ್ರೇಷ್ಠವೆಂದು ಹೇಳುವ ಬುದ್ಧಿಜೀವಿಗಳು ನಮ್ಮ ಮಧ್ಯೆ ಇಂದಿಗೂ ಇದ್ದಾರೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ನಾಡಿನ ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಜನಪದವೇ ಈ ನಾಡಿನ ಸಾಂಸ್ಕೃತಿಕ ವಕ್ತಾರರೆಂದು ಗುರುತಿಸುವ ಕೆಲಸ ಇಂದಿಗೂ ಆಗದಿರುವುದು ವಿಷಾದದ ಸಂಗತಿ. ಬಯಲಾಟದ ಹಾಡುಗಾರಿಕೆ ದಕ್ಷಿಣಾದಿ ಮತ್ತು ಉತ್ತರಾದಿ ಪರಂಪರೆಯನ್ನು ಸಂಪೂರ್ಣವಾಗಿ ಅವಲಂಬಿಸಿವುದಲ್ಲ. ಬಯಲಾಟದ ಹಾಡುಗಾರಿಕೆಗೆ ಸುದೀರ್ಘ ಇತಿಹಾಸವಿದೆ ಎಂದರು. ಶಿಬಿರದ ನಿರ್ದೇಶಕ ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಸಾ ಮೆಹರವಾಡೆ, ಬಸವರಾಜ ಶಾಬಾದಿಮಠ, ಶಂಕ್ರಣ್ಣ ಸಂಕಣ್ಣನವರ ಮುಂತಾದವರು ಇದ್ದರು. ಮಧ್ಯಾಹ್ನ ಬೆಟಗೇರಿಯ ಹೊಸಗರಡಿ ಜಾನಪದ ಕಲಾ ತಂಡದ ಅಶೋಕ ಸುತಾರ, ನರಸಪ್ಪ ಪೋಪ್ತಿ ಗಣೇಶ ರಜಪೂತ ಮತ್ತು ಸಂಗಡಿಗರಿಂದ ದೊಡ್ಡಾಟದ ಪಾತ್ರ ಮತ್ತು ಕುಣಿತಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಬಸವರಾಜ ಶಿಗ್ಗಾವ ಸ್ವಾಗತಿಸಿದರು. ರಾಜಶೇಖರ ಮಾಳವಾಡ ನಿರೂಪಿಸಿದರು. ಸಂಸ್ಥೆ ಅಧ್ಯಕ್ಷ ಎಂ.ಎಸ್. ಮಾಳವಾಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement