ಸಿಬ್ಬಂದಿ ವರ್ಗಾವಣೆ ರದ್ದುಪಡಿಸಿ
ನರಗುಂದ: ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಎಫ್ಡಿಎ, ಎಸ್ಡಿಎ ಸೇರಿದಂತೆ ಇತರ ಕಚೇರಿ ಸಿಬ್ಬಂದಿಯನ್ನು ದಿಢೀರನೆ ವರ್ಗಾವಣೆ ಮಾಡಿದ್ದು, ಸಂದೇಹ ತಂದಿದೆ. ಅದಕ್ಕೆ ಈ ವರ್ಗಾವಣೆ ರದ್ದು ಮಾಡಬೇಕೆಂದು ಪುರಸಭೆ ಉಪಾಧ್ಯಕ್ಷ ಕಿರಣ ಮುಧೋಳ ಒತ್ತಾಯಿಸಿದರು.
ಮಂಗಳವಾರ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪುರಸಭೆ ಕಚೇರಿಯ ಕಾರ್ಯಗಳನ್ನು ಮಾಡಲು ಸರ್ಕಾರ ನಿಯಮದ ಪ್ರಕಾರ 11 ಹುದ್ದೆಗಳಿವೆ. ಅದರಲ್ಲಿ ಕೇವಲ ಮುಖ್ಯಾಧಿಕಾರಿ ಸೇರಿ 7 ಜನ ಮಾತ್ರ ಇಂದು ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಮುಖ್ಯಾಧಿಕಾರಿ ಸೇರಿ 5 ಸಿಬ್ಬಂದಿಯನ್ನು ಆಡಳಿತ ಪಕ್ಷದವರು ರಾಜಕೀಯ ದುರದ್ದೇಶದಿಂದ ವರ್ಗಾವಣೆ ಮಾಡಿದ್ದು ವಿಷಾದನೀಯ. ಪಟ್ಟಣದ ಪ್ರತಿನಿತ್ಯ ಎಲ್ಲ ಕೆಲಸ ಕಾರ್ಯಗಳು ಸಾಗಬೇಕೆಂದರೆ ಕಚೇರಿಯಲ್ಲಿ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅವಶ್ಯವಾಗಿರಬೇಕು. ಇದ್ಯಾವುದನ್ನು ಚಿಂತಿಸದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಈ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ನೀಡಿ ವರ್ಗಾವಣೆ ರದ್ದುಗೊಳಿಸುವಂತೆ ಮನವಿ ಸಲ್ಲಿಸಲಾಗುವುದು.
ಕಾಂಗ್ರೆಸ್ ಸದಸ್ಯರು ಗೈರು: ಆಡಳಿತ ಪಕ್ಷದ ಅಧ್ಯಕ್ಷರು ಪುರಸಭೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕುರಿತು ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಎಲ್ಲ ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರೂ ಈ ಸುದ್ದಿಗೋಷ್ಠಿಯಲ್ಲಿ ಅವರು ಗೈರಾಗಿದ್ದು ನೋಡಿದರೆ ನಗರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಕಂಡು ಬರುತ್ತದೆ ಎಂದು ಹಾಜರಿದ್ದ ಸದಸ್ಯರು ಆರೋಪಿಸಿದರು.
ದಲಿತ ವಿರೋಧಿ: ಕಾಂಗ್ರೆಸ್ನ ಶಾಸಕರು ಪುರಸಭೆಯಲ್ಲಿ ಶ್ರೀಕಾಂತ ನರಗುಂದ ಮತ್ತು ಸೋಮು ಎಂಬುವರು ದಲಿತರು ಸೇವೆ ಮಾಡುವಂತೆ ಸಿಬ್ಬಂದಿ ಬಿಜೆಪಿ ಪರ ಕೆಲಸ ಮಾಡುತ್ತಾರೆಂದು ತಿಳಿದು ಇವರನ್ನು ಕೂಡ ವರ್ಗಾವಣೆ ಮಾಡಿದ್ದರಿಂದ ಶಾಸಕರು ದಲಿತ ವಿರೋಧಿಗಳಾಗಿದ್ದಾರೆಂದು ಪುರಸಭೆ ಸದಸ್ಯ ವಾಸು ಜೋಗಣ್ಣವರ ಆರೋಪಿಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಜ್ಯೋತಿ ಪತ್ರಿ, ಸದಸ್ಯ ಉಮೇಶ ಕುಡನ್ನವರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರು ಪವಾರ, ಬಸಣ್ಣವ್ವ ಪಿಡ್ಡನಾಯ್ಕರ, ನೇತಾರ ಪೂಜಾರ, ಸಾವಿತ್ರ ಹಟ್ಟಿ, ರೇಣುಕಾ ಕೋರಿ ಇತರರಿದ್ದರು.