ಅಕ್ರಮ ಮರಳು ದಂಧೆಗೆ ಬ್ರೇಕ್
ಕನ್ನಡಪ್ರಭ ವಾರ್ತೆ, ಗದಗ, ಜು. 24
ಜಿಲ್ಲೆಯ ತುಂಗಭದ್ರಾ, ಮಲಪ್ರಭಾ ನದಿ ಪಕ್ಕದ ರೈತರ ಪಟ್ಟಾ ಜಮೀನುಗಳಲ್ಲಿ ದಿನೇ ದಿನೆ ಮರಳು ದಂಧೆ ಹೆಚ್ಚಾಗುತ್ತಿದ್ದು. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ರೋಣ ಹಾಗೂ ನರಗುಂದ ತಾಲೂಕುಗಳಲ್ಲಿ ಮರಳು ದಂಧೆ ಜಾಲ ವ್ಯಾಪಕವಾಗಿದ್ದು, ಇದುವರೆಗೂ ಖಾಲಿಯಾಗಿದ್ದ ನದಿ ಪಾತ್ರದಲ್ಲಿಯೇ ಮರಳು ದಂಧೆ ನಡೆಯುತ್ತಿತ್ತು. ಆದರೀಗ ನದಿಗಳಿಗೆ ನೀರು ಬಂದ ಹಿನ್ನೆಲೆಯಲ್ಲಿ ಮರಳು ದಂಧೆಕೋರರು ತಮ್ಮ ಕಾರ್ಯ ವ್ಯಾಪ್ತಿಯನ್ನು ನದಿ ಹಾಗೂ ಹಳ್ಳಗಳ ಪಕ್ಕದ ಪಟ್ಟಾ ಜಮೀನುಗಳಿಗೆ ವಿಸ್ತರಿಸಿಕೊಂಡಿದ್ದಾರೆ. ಪಟ್ಟಾ ಜಮೀನುಗಳಲ್ಲಿನ ಮರಳನ್ನು ಜೆಸಿಬಿಗಳ ಮೂಲಕ ಅಗೆದು ಮಾರಾಟ ಮಾಡಲಾಗುತ್ತಿದೆ.
ಎಲ್ಲೆಲ್ಲಿ ದಂಧೆ
ಜಿಲ್ಲೆಯ ಶಿರಹಟ್ಟಿ, ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಕ್ಕದ ಹಾಗೂ ದೊಡ್ಡ ಹಳ್ಳಗಳ ಪಕ್ಕದ ಜಮೀನುಗಳಲ್ಲಿ ನರಗುಂದ ಮತ್ತು ರೋಣ ತಾಲೂಕಿನ ಮಲಪ್ರಭಾ ಮತ್ತು ದೊಡ್ಡ ಹಳ್ಳಗಳ ಪಕ್ಕದ ಜಮೀನುಗಳಿಗೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಎಕರೆಗೆ ತಿಂಗಳಿಗೆ 10 ರಿಂದ 15 ಲಕ್ಷ ಲೀಜ್‌ಗೆ ಪಡೆದು ಮರಳು ದಂಧೆ ನಡೆಸುತ್ತಿರುವುದು ಬಹಿರಂಗ ಸತ್ಯವಾಗಿದೆ. ಮರಳು ದಂಧೆಯಲ್ಲಿ ಆಡಳಿತ, ವಿರೋಧ ಪಕ್ಷ ಎನ್ನುವ ಭೇದಭಾವವಿಲ್ಲದೇ ತಮ್ಮ ಕೆಲಸ ಪೂರ್ಣಗೊಳಿಸಿಕೊಳ್ಳುತ್ತಿರುವುದು ಗೋಚರವಾಗುತ್ತದೆ.
ವಿವರ
ಪರವಾನಗಿ ಇಲ್ಲದೇ ಮರಳು ಸಾಗಿಸುತ್ತಿದ್ದ 127 ಲಾರಿಗಳು, 45 ಟ್ರ್ಯಾಕ್ಟರ್‌ಗಳನ್ನು ಇದುವರೆಗೆ ವಶಕ್ಕೆ ಪಡೆದಿರುವ ಅಧಿಕಾರಿಗಳು, ರು. 15 ಲಕ್ಷಕ್ಕೂ ಅಧಿಕ ದಂಡವನ್ನು ವಿಧಿಸಿದ್ದಾರೆ. 12 ಹೊಲಗಳು ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ರು. 15 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ನೇತೃತ್ವದಲ್ಲಿ 7ಕ್ಕೂ ಹೆಚ್ಚು ಬಾರಿ ದಾಳಿ ಮಾಡಿ ರು. 10 ಲಕ್ಷಕ್ಕೂ ಅಧಿಕ ಮೌಲ್ಯದ ಮರಳು ಜಪ್ತಿ ಮಾಡಲಾಗಿದೆ.
-ಶಿವಕುಮಾರ ಕುಷ್ಟಗಿ