ಒಳಗಟ್ಟಿ ಕಾಮಗಾರಿ ಬಿಲ್ ವಿಳಂಬ: ದೂರು
ಕನ್ನಡಪ್ರಭ ವಾರ್ತೆ, ರೋಣ, ಜು. 24
2012ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಲಕ್ಕೆ ಒಳಗಟ್ಟಿ ನಿರ್ಮಿಸಲಾಗಿದ್ದು, ಕಾಮಗಾರಿಯ ಬಿಲ್ ವಿತರಣೆ ಮಾಡುವಲ್ಲಿ ತಾಲೂಕಿನ ಚಿಕ್ಕಮಣ್ಣೂರ ಗ್ರಾಪಂ 2 ವರ್ಷಗಳಿಂದ ಸತಾಯಿಸುತ್ತಿದೆ ಎಂದು ಬಾಸಲಾಪುರ ಗ್ರಾಮದ ಹನುಮಂತಪ್ಪ ಹುಲ್ಲೂರ ಅವರು ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದರು.
ರು. 25 ಸಾವಿರಗಳಲ್ಲಿ ಒಳಗಟ್ಟಿ ನಿರ್ಮಿಸಿಕೊಳ್ಳಲಾಗಿದ್ದು, ಕಾಮಗಾರಿಗೆ ಅನುಗುಣ ಹಂತ ಹಂತವಾಗಿ ಬಿಲ್ ಪಾವತಿಸಲಾಗುವುದು ಎಂದು ಗ್ರಾಪಂ ಅಧಿಕಾರಿಗಳು ಹೇಳಿದ್ದರು. ಅದರಂತೆಯೇ ಒಳಗಟ್ಟಿ ಕಾಮಗಾರಿ ಪೂರ್ಣಗೊಂಡಿದೆ. 2 ವರ್ಷಗಳ ಹಿಂದೆಯೇ ಎರಡು ಹಂತಗಳಲ್ಲಿ ಒಂದು ಸಾರಿ ರು. 3 ಸಾವಿರ, ಮತ್ತೊಂದು ಸಾರಿ ರು. 9 ಸಾವಿರ ಮಾತ್ರ ವಿತರಿಸಿದ್ದಾರೆ. ಇನ್ನೂ ರು. 13 ಸಾವಿರ ಬರಬೇಕು. ಈ ಕುರಿತು ಗ್ರಾಪಂ ಪಿಡಿಒ ಮತ್ತು ತಾಪಂ ಇಒ ಗಮನಕ್ಕೆ ತರಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನಿತ್ಯ ಗ್ರಾಪಂಗೆ ಮತ್ತು ತಾಪಂಗೆ ಅಲೆಯುವಂತಾಗಿದೆ. ಬಡವರಿಗಾಗಿ ಜಾರಿಗೆ ತಂದ ಸರ್ಕಾರದ ಯೋಜನೆಗಳು ಪ್ರಯೋಜನಕ್ಕಿಂತ ಹೆಚ್ಚಿನ ರೀತಿಯಲ್ಲಿ ನಮಗೆ ಮಾನಸಿಕ ಹಿಂಸೆ ನೀಡುತ್ತಿವೆ. ದಯವಿಟ್ಟು ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಹನುಮಂತಪ್ಪ ಹುಲ್ಲೂರ ಲೋಕಾಯುಕ್ತರಲ್ಲಿ ಕಣ್ಣೀರು ಹಾಕಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಲೋಕಾಯುಕ್ತ ಸಿಪಿಐ ರವಿ ಪುರುಷೋತ್ತಮ ಅವರು ತಾಪಂ ಇಒ ಎಸ್.ಎಂ.ಪಿಡಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಯಿಸಿ, ಕಚೇರಿಯ ಯಾವುದೇ ತಾಂತ್ರಿಕ ತೊಂದರೆಯನ್ನು ರೈತರಿಗೆ ಹೇಳದೇ, ಅವರಿಗೆ ಸರ್ಕಾರದ ಯೋಜನೆಗಳ ಲಾಭ ಸಮರ್ಪಕವಾಗಿ ತಲುಪುವಂತೆ ಜವಾಬ್ದಾರಿ ವಹಿಸಬೇಕು. ಕೂಡಲೇ ಬಾಕಿ ಹಣವನ್ನು ರೈತ ಹನುಮಂತಪ್ಪ ಹುಲ್ಲೂರ ಅವರ ಖಾತೆಗೆ ಜಮಾ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಆಗ ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, 2013ರಲ್ಲಿಯೇ ಪೂರ್ಣ ಹಣವನ್ನು ಸಂದಾಯ ಮಾಡಬೇಕಿತ್ತು. ಆದರೆ, ಗ್ರಾಪಂನಲ್ಲಿನ ತಾಂತ್ರಿಕ ತೊಂದರೆಯ ದೋಷದಿಂದಾಗಿ ಬಾಕಿ ಹಣ ವಿತರಣೆಯಲ್ಲಿ ವಿಳಂಬವಾಗಿದೆ. ಕೂಡಲೇ ಬಾಕಿ ಹಣವನ್ನು ಒಳಗಟ್ಟಿ ನಿರ್ಮಾಣದ ಪ್ರಸ್ತುತ ಭೌತಿಕ ಸ್ಥಿತಿ ಮತ್ತು ಕಾಮಗಾರಿ ನೈಜತೆಯನ್ನು ಪರಿಶೀಲಿಸಿ ಹೆಚ್ಚುವರಿ ಕ್ರಿಯಾಯೋಜನೆಯ ಮೂಲಕ, ಬಾಕಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೇವಲ ಒಂದು ಅರ್ಜಿ ಮಾತ್ರ ಬಂದಿದ್ದು, ಅದರ ಪರಿಶೀಲನೆ ಕೈಗೊಳ್ಳಲಾಯಿತು. ಈ ವೇಳೆ ಲೋಕಾಯುಕ್ತ ಸಿಬ್ಬಂದಿ ಪಿ.ಎಂ. ಹಿರೇಮಠ, ವಿರೂಪಾಕ್ಷ ಅರಿಷಿಣದ ಉಪಸ್ಥಿತರಿದ್ದರು.