ರೈತ ಸಮುದಾಯ ಹೋರಾಟಕ್ಕಿಳಿಯಲಿ: ವಿಜಯ ಕುಲಕರ್ಣಿ
ನರಗುಂದ: ರೈತ ಸಮುದಾಯ ರಾಜಕಾರಣಿಗಳ ಮಾತಿಗೆ ಮರಳಾಗದೆ ಹೋರಾಟದ ಹಾದಿ ತುಳಿಯಬೇಕಿದೆ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಸೋಮವಾರ ಪಟ್ಟಣದ ರೈತ ಬಂಡಾಯದಲ್ಲಿ ವೀರ ಮರಣ ಅಪ್ಪಿದ ವೀರಪ್ಪ ಕಡ್ಲಿಕೊಪ್ಪ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕೃಷಿ ಪ್ರಧಾನ ದೇಶದಲ್ಲಿ ರೈತ ಒಗ್ಗೂಡದೇ ಇರುವುದರಿಂದ ಹಲವಾರು ಪಕ್ಷಗಳು ಅಧಿಕಾರಕ್ಕೆ ಬರುವ ವೇಳೆಯಲ್ಲಿ ರೈತರ ಬಗ್ಗೆ ಮಾತನಾಡಿ ನಂತರ, ಅದನ್ನು ಮೆರೆತು ಬಿಡುವ ಪರಿಪಾಠವನ್ನು ಹಾಕಿಕೊಂಡು ಬಂದಿದ್ದು ಇದನ್ನು ಹೋಗಲಾಡಿಸಬೇಕಾದಲ್ಲಿ ರೈತರೆಲ್ಲಾ ಒಗ್ಗೂಡಿಸಬೇಕಿದೆ ಎಂದರು.
1980ರ ನವೆಂಬರ್ 1ಕ್ಕೆ ನರಗುಂದದಲ್ಲಿ ನಡೆದ ರೈತ ಹೋರಾಟದಲ್ಲಿ ಮಡಿದ ಚಿಕ್ಕನರಗುಂದ ರೈತ ವೀರಪ್ಪ ಕಡ್ಲಿಕೊಪ್ಪ ಮತ್ತು ಅಳಗವಾಡಿ ಬಸಪ್ಪ ಲಕ್ಕಂಡಿ ಅವರ ಕುರಿತು 'ಅಮರ ವೀರ' ಎಂಬುವ ಚಿತ್ರವನ್ನು ಓಂ ಪ್ರಕಾಶ ಫಿಲ್ಮ್ನ ಮೂಲಕ ಸಿದ್ದಲಿಂಗಯ್ಯ ವಿರಕ್ತಮಠವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಸಹಕಾರವನ್ನು ತಾಲೂಕಿನ ರೈತರು ನೀಡಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಪ್ರಾಂತ ರೈತ ಸಂಘ, ಜೆಡಿಎಸ್, ಬಸವ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಕಳಸಾ ಬಂಡೂರಿ ಹೋರಾಟ ಸಮಿತಿ, ರೈತ ಸೇನಾ ಕರ್ನಾಟಕ, ಪುಟ್ಟರಾಜ ಅಂಗ ವಿಕಲಚೇತನರ ಸಂಘ, ಜಯ ಕರ್ನಾಟಕ ಸಂಘ, ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಮುಂತಾದ ಸಂಘಟನೆಗಳು ವೀರಗಲ್ಲಿಗೆ ಗೌರವ ಸಲ್ಲಿಸಿದರು. ಪಂಚಗೃಹ ಗುಡ್ಡದ ಹಿರೇಮಠ ಸಿದ್ದಲಿಂಗ ಶ್ರೀಗಳು, ಹೆಬ್ಬಾಳದ ವೀರೇಶ ದೇವರು, ಮುತ್ತು ಚನ್ನಪ್ಪಗೌಡ್ರ, ನೀಲಕ್ಕ ಹಸಬಿ, ರಾಜೇಶ್ವರಿ ವೀರನಗೌಡ್ರ, ಈರಮ್ಮ ಐನಾಪುರ ಹಾಜರಿದ್ದರು.