ಬಯಲು ಸೀಮೆಯಲ್ಲಿ ಮಲ್ಲಿಗೆ ಪರಿಮಳ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 25
ಮಲ್ಲಿಗೆ ಎಂದಾಕ್ಷಣ ಮಹಿಳೆಯರ ಮುಖ ಅರಳುತ್ತದೆ. ಜತೆಗೆ ಉತ್ತರ ಕರ್ನಾಟಕದ ಬಯಲು ಸೀಮೆ ನಾಡಲ್ಲಿ ದಣಿದು ಬಾಡಿರುವ ಅನ್ನದಾತನ ಮನಸ್ಸು ಅರಳಿಸಿದೆ.
ಹೌದು, ಸಮೀಪದ ಲಕ್ಕಲಕಟ್ಟಿ ಗ್ರಾಮ ರೈತ ಬಸಯ್ಯ ಕಳ್ಳಿಮಠ ಅವರ ತೋಟದಲ್ಲಿ ಅಂತರ್ಜಲ ಮಟ್ಟ ಕುಸಿತ, ಇಳುವರಿ ಕಡಿಮೆ ಜತೆ ಹಲವಾರು ಸಮಸ್ಯೆಗಳ ಮಧ್ಯೆಯೂ ಗಿಡದಲ್ಲಿ ಅರಳಿರುವ ಮಲ್ಲಿಗೆ ಹೂವು ಬಡ ಕುಟುಂಬ ಪಾಲಿಗೆ ಕೊಂಚ ಆಧಾರವಾಗಿದೆ.
ಮಲ್ಲಿಗೆ ಹೂವು ಫಸಲು ಮಳೆಗಾಲದ ಆರಂಭದ ದಿನ ಜೂನ್‌ನಲ್ಲಿ ಸಸಿ ನೆಟ್ಟಿದ್ದಾರೆ. ಮಲ್ಲಿಗೆ ಬೆಳೆಯುವ ಉದ್ದೇಶಿತ ಜಮೀನಿನಲ್ಲಿ 5-6 ಅಡಿಗೆ 1ರಂತೆ, 1 ಅಡಿ ಆಳ, 2 ಅಡಿ ಅಗಲದಂತೆ ತಗ್ಗುಗಳನ್ನು ತೆಗೆಯಬೇಕು. ಉಸುಕು, ಕೆಂಪು ಮಣ್ಣು ಹಾಗೂ ಕೊಟ್ಟಿಗೆ ಗೊಬ್ಬರ ತಗ್ಗಿನಲ್ಲಿ ಹಾಕಿ ನೀರುಣಿಸಬೇಕು. ಸಸಿಗಳನ್ನು ನೆಟ್ಟು 8 ದಿನಗಳಿಗೆ ಒಮ್ಮೆ ಚೆನ್ನಾಗಿ ನೀರುಣಿಸಬೇಕು. 15 ದಿನಕ್ಕೊಮ್ಮೆ ಬೆಳೆಯಲ್ಲಿನ ಕಳೆ (ಕಸ) ತೆರವುಗೊಳಿಸಬೇಕು. ಹೀಗೆ ಸಸಿ ನೆಟ್ಟ ದಿನದಿಂದ 6ರಿಂದ 7 ತಿಂಗಳ ವರೆಗೆ ಸಸಿ ಪಾಲನೆ ಮಾಡಿದಾಗ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಹೂವು ಬಿಡಲಾರಂಭಿಸುತ್ತದೆ. ಹೀಗೆ ಸಸಿ ನೆಡುವ ಕಾರ್ಯದಿಂದ ಹೂವು ಬಿಡುವ ವರೆಗೆ ಎಕರೆಗೆ ಸಹಸ್ರಾರು ಖರ್ಚಾಗುತ್ತದೆ ಎನ್ನುತ್ತಾರೆ ರೈತರು.
ಮಾರಾಟಗಾರಿಗೆ ಹೆಚ್ಚು ಲಾಭ
ಮಲ್ಲಿಗೆಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಹಬ್ಬ, ಹರಿದಿನಗಳು, ಮದುವೆ, ಜಾತ್ರೆಗಳು ಅವ್ಯಾಹತವಾಗಿ ನಡೆಯುವುದರಿಂದ ಈ ದಿನಗಳಲ್ಲಿ ಮಲ್ಲಿಗೆಗೆ ಕೆಜಿಗೆ ರು. 300 ರಿಂದ 400 ವರೆಗೆ ದರ ಇರುತ್ತದೆ. ಮಾರುಕಟ್ಟೆಯಲ್ಲಿ ಹೂವಿಗೆ ಇಷ್ಟೆಲ್ಲ ಬೆಲೆ ದೊರೆಯುತ್ತಿದ್ದರೂ ಮಾರಾಟಗಾರರು ಮಾತ್ರ ಹೂ ಬೆಳೆದ ಬೆಳೆಗಾರರಿಂದ ಪಡೆಯುವ ಮಲ್ಲಿಗೆಗೆ ಕೆಜಿಗೆ ರು. 150 ರಿಂದ 200 ದರ ನಿಗದಿಪಡಿಸುತ್ತಾರೆ. ಹೀಗಾಗಿ ಹೂವು ಬಿಡಿಸುವ, ನೀರುಣಿಸುವ ಹಾಗೂ ಕಳೆ ತೆರವುಗೊಳಿಸಲು ಕೂಲಿಗಳಿಗೆ ದುಬಾರಿ ಮೊತ್ತದ ಹಣ ನೀಡಿ ಬೆಳೆಗಾರರು ಸುಸ್ತಾಗುತ್ತಿದ್ದಾರೆ.
ಮಾರುಕಟ್ಟೆ ಕೊರತೆ
ರೋಣ ತಾಲೂಕಿನ ಹಲವಾರು ಗ್ರಾಮಗಳಲ್ಲಿ 30 ಹೆಕ್ಟೇರ್ ಹೂವು ಬೆಳೆಯನ್ನು ಬೆಳೆಯಲಾಗಿದ್ದು, ಹೂವು ಬೇಸಾಯ ಮಾಡಿದ ರೈತರಿಗೆ ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ಪಟ್ಟಣಗಳಲ್ಲಿ ರೈತರಿಗೆ ಮಾರಾಟದಲ್ಲಿ ಶೋಷಣೆ ಮಾಡಿ ಶೇ. 12ರಷ್ಟು ಕಮೀಶನ್ ಪಡೆಯಲಾಗುತ್ತದೆ. ಅಲ್ಲದೇ ಹರಾಜಿನಲ್ಲಿ ವರ್ತಕರು ಹೇಳಿದ ದರಕ್ಕೆ ಮಾರಾಟವಾಗುತ್ತದೆ ಎಂದು ರೈತರು ಆರೋಪಿಸುತ್ತಾರೆ.
ಹಬ್ಬದ ದಿನಗಳಲ್ಲಿ ಸೇವಂತಿ, ಗಲಾಟ ಹೂವಿಗೆ ಉತ್ತಮ ಬೆಲೆ ದೊರಕಿತ್ತು. ಆದರೆ ಈಚೆಗೆ ಹೂವು ಬೆಲೆಯಲ್ಲಿ ಕುಸಿತ ಕಂಡಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ.
ಹೂವು ಬಿಡದಿರಲು ಕಾರಣವೇನು?
ಮೊದಲೆಲ್ಲ ದಿನಕ್ಕೆ 20ರಿಂದ 30 ಕೆಜಿ ಇಳುವರಿ ಬರುತ್ತಿತ್ತು. ಈಗ ಬಹಳ ಕಡಿಮೆಯಾಗಿದೆ ಎಂದು ರೈತ ಬಸಯ್ಯ ಕಳ್ಳಿಮಠ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಮೂಲ ಕಾರಣ ತಿಳಿಯಲು ಹೊರಟರೆ ಪೊಟ್ಯಾಸಿಯಂ ಕೊರತೆಯಿಂದ ಬಳಲುತ್ತಿರುವ ಮಲ್ಲಿಗೆ ಬೆಳೆ ಹೂವು ಬಿಡುವುದಿಲ್ಲ. ಹೀಗಾಗಿ ಬೆಳೆ ಮತ್ತೆ ಹೂವು ಬಿಡಬೇಕಾದರೆ, ರಂಜಕ, ಪೊಟ್ಯಾಸಿಯಂ ಹಾಗೂ ಪಾಸ್ಫರಸ್ ಮೂರು ಬೆರೆಸಿ ಕಾಂಡವನ್ನು ಬಿಟ್ಟು ಸುತ್ತಲೂ ಗಿಡವೊಂದಕ್ಕೆ 20 ಗ್ರಾಂ ಸುರಿದು ನೀರನ್ನು ಹಾಯಿಸಬೇಕು. ಜತೆಗೆ ಬೆಳೆಯ ಸುತ್ತಲೂ ಸ್ವಚ್ಛತೆ ಕಾಪಾಡಿದಾಗ ಮಾತ್ರ ಬೆಳೆ ಸಕಾಲಕ್ಕೆ ಹೂವು ಬಿಡುತ್ತದೆ ಎನ್ನಲಾಗುತ್ತಿದೆ.
- ಡಿ.ಜಿ. ಮೋಮಿನ್