ಸಮೃದ್ಧ ರಾಷ್ಟ್ರ ನಿರ್ಮಿಸೋಣ
ಕನ್ನಡಪ್ರಭ ವಾರ್ತೆ, ಗದಗ, ಜು. 25
ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಬಳ್ಳಾರಿ ಸಂಸದ, ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಅವರು ಶುಕ್ರವಾರ ಗದಗ ನಗರದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.
ರಂಜಾನ್ ಸಂದರ್ಭದಲ್ಲಿ ಉಪವಾಸ ವ್ರತ ಮಾಡುವ ಮುಸ್ಲಿಂ ಬಾಂಧವರು ಆತ್ಮ ಹಾಗೂ ದೇಹ ಶುದ್ಧಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಾವೆಲ್ಲ ಅವರಿಗೆ ಶುಭ ಹಾರೈಸೋಣ, ಹಿಂದು- ಮುಸ್ಲಿಂ ಏಕತೆಯ ವಿಷಯದಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದ್ದು, ಇಲ್ಲಿನ ಹಲವಾರು ಹಿಂದುಗಳು ಇಂದಿಗೂ ಉಪವಾಸ ವ್ರತ ಮಾಡುವ ಮೂಲಕ ಭಾವೈಕ್ಯತೆಗೆ ನಾಂದಿಯಾಗಿದ್ದಾರೆ ಎಂದರು.
ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಯುವ ಮುಖಂಡ ಅನಿಲ ಮೆಣಸಿನಕಾಯಿ, ಸಣ್ಣವೀರಪ್ಪ ಹಳ್ಳೆಪ್ಪನವರ, ಮುಸ್ಲಿಂ ಸಮುದಾಯದ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಗದಗ ಜಿಲ್ಲೆಯ ಬದಲಾವಣೆಯಲ್ಲಿ ಶ್ರೀರಾಮುಲು ಅವರ ಪಾತ್ರದ ಕುರಿತು ವಿವರಿಸಿದರು.
ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ನಗರಸಭೆಯ ಸದಸ್ಯರಾದ ಮಂಜುನಾಥ ಮುಳಗುಂದ ಮುಂತಾದವರು ಹಾಜರಿದ್ದರು.