ಸಿಸಿಎನ್ಗಿಲ್ಲ ಇಂಗ್ಲಿಷ್ ಶಿಕ್ಷಕರ ಭಾಗ್ಯ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 25
ಪಟ್ಟಣದ ಸಿ.ಸಿ. ನೂರಶೆಟ್ಟರ್ ಸರ್ಕಾರಿ ಪ್ರೌಢಶಾಲೆ ಆರಂಭದಿಂದ ಫಲಿತಾಂಶದಲ್ಲಿ ಸುಧಾರಣೆ ಕಂಡಿದ್ದು, ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಆದರೆ, ಕಾಯಂ ಇಂಗ್ಲಿಷ್ ಶಿಕ್ಷಕರಿಲ್ಲದಿರುವುದು ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ.
ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಮುಗಿಯುತ್ತಾ ಬಂದರೂ ಸಮರ್ಥ ಆಂಗ್ಲ ಭಾಷಾ ಬೋಧಕರ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಆ ವಿಷಯದಲ್ಲಿ ಹಿಂದುಳಿಯುವಂತಾಗಿದೆ. ಒಟ್ಟಾರೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸುತ್ತಿರುವ ಗ್ರಾಮೀಣರು ಇಂಗ್ಲಿಷ್ ಎಂದೊಡನೆ ಬೆಚ್ಚಿ ಬೀಳುವಂತಾಗಿದೆ.
ಎಲ್ಲ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸುವ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲಿ ವಿಫಲರಾಗುತ್ತಿರುವುದು ಕಳವಳ ಮೂಡಿಸಿದೆ. ಶಾಲೆಯಲ್ಲಿ ಲಭ್ಯವಿರುವ ಹಿಂದಿ, ಕನ್ನಡ ಹಾಗೂ ಇನ್ನಿತರ ವಿಷಯಗಳ ಶಿಕ್ಷಕರು ಇಂಗ್ಲಿಷ್ ವಿಷಯ ಬೋಧಿಸುವ ಅನಿವಾರ್ಯತೆ ಎದುರಾಗಿದ್ದು, ಈ ಬಾರಿ ಆ ಕೆಲಸವೂ ನಡೆದಿಲ್ಲ.
ನಿವಾಸಿಗಳ ಹೇಳಿಕೆ: ಬೋಧಕರ ಕೊರತೆ ನಡುವೆ ಸಿಸಿಎನ್ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಯಲ್ಲಿ ಕೊಡುತ್ತಿಲ್ಲ. ಶಾಲೆ ಸುತ್ತುವರಿದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಮಕ್ಕಳು ನಿತ್ಯ ಊಟ ಮಾಡುವ ಸ್ಥಿತಿ ಇದೆ. ಕೆಲ ಮಕ್ಕಳು ತಟ್ಟೆಯಲ್ಲಿ ಊಟ ಹಾಕಿಸಿಕೊಂಡು ರಸ್ತೆ ಮಾರ್ಗವಾಗಿ ಪ್ರೌಢ ಶಾಲೆಗೆ ಬಂದು ಊಟ ಮಾಡುತ್ತಿದ್ದು, ರಸ್ತೆಯಲ್ಲಿ ಮಂಗ, ನಾಯಿ, ಹಂದಿಗಳ ಕಾಟದಿಂದ ಹೆದರುತ್ತಿದ್ದಾರೆ.
ಕುಡಿಯಲು ನೀರಿಲ್ಲ, ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಆಟದ ಮೈದಾನದಲ್ಲಿ ಜಾಲಿ ಕಂಟಿಗಳು ಬೆಳೆದು ಮಕ್ಕಳಿಗೆ ಸಂಚರಿಸಲು ಬಾರದಂತಾಗಿದೆ ಎಂದು ಯುವ ಮುಖಂಡ ರಮೇಶ ತುಳಿ ಆರೋಪಿಸುತ್ತಾರೆ.
-ಮಹದೇವಪ್ಪ ಎಂ. ಸ್ವಾಮಿ