ಇಂದಿನಿಂದ ಕೃಷಿಗೋಷ್ಠಿ, ಧರ್ಮಸಭೆ
ಕನ್ನಡಪ್ರಭ ವಾರ್ತೆ, ರೋಣ, ಜು. 27
ಮಾತೋಶ್ರೀ ಬಸಮ್ಮನವರು ಸಂಗನಗೌಡ ಪಾಟೀಲರ 10ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜು. 28ರಿಂದ ಆ. 1ರ ವರೆಗೆ ಕೃಷಿ ಗೋಷ್ಠಿ, ಮಹಿಳಾ ಗೋಷ್ಠಿ, ಧರ್ಮಸಭೆ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾತೋಶ್ರೀ ಬಸಮ್ಮನವರು ಸಂಗನಗೌಡ ಪಾಟೀಲ ಪುಣ್ಯಸ್ಮರಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 28ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆಸ್ಪತ್ರೆಯ ಆವರಣದಲ್ಲಿ ಅನುಭವಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಗಾಜು ಬಿಂದು ಅಳವಡಿಕೆ ಶಸ್ತ್ರ ಚಿಕಿತ್ಸಾ ಶಿಬಿರ ಜರುಗಲಿದೆ. ಜು. 29ರಂದು ಸಾಯಂಕಾಲ 7 ಗಂಟೆಗೆ ಕೃಷಿ ಗೋಷ್ಠಿ, ಜು. 30ರಂದು ಸಾಯಂಕಾಲ 7 ಗಂಟೆಗೆ ಮಹಿಳಾ ಗೋಷ್ಠಿ, ಜು. 31ರಂದು ಧರ್ಮಸಭೆ ಸೇರಿದಂತೆ ನಾನಾ ಕಾರ್ಯಕ್ರಮಗಳು ಪಟ್ಟಣದ ಗುಲಗಂಜಿ ಮಠದ ಸಭಾಭವನದಲ್ಲಿ ಜರುಗಲಿವೆ. ಜಕ್ಕಲಿ ರಸ್ತೆಯ ಮಾತೋಶ್ರೀ ಬಸಮ್ಮನವರ ಸಮಾಧಿ ಸ್ಥಳದಲ್ಲಿ ಪುಣ್ಯ ಸ್ಮರಣೋತ್ಸವ ಸಮಾರಂಭ ಜರುಗಲಿದೆ. ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಹಾಲಕೇರಿ ಡಾ. ಅಭಿನವ ಅನ್ನದಾನ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಗೋಷ್ಠಿಗಳ ಉಪನ್ಯಾಸ
ಕೃಷಿಗೋಷ್ಠಿಯಲ್ಲಿ ಧಾರವಾಡ ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಡಾ. ವೀರೇಶ ತರ್ಲಿ ಅವರಿಂದ ರೈತರ ಇಂದಿನ ಅವಶ್ಯಕತೆ ಹೈನುಗಾರಿಕೆ ಕುರಿತು ಉಪನ್ಯಾಸ, ಮಹಿಳಾ ಗೋಷ್ಠಿಯಲ್ಲಿ ಹುನಗುಂದ ಸಿ.ಆರ್.ಸಿ. ಲಲಿತಾ ಹೊಸಪೇಟಿ ಅವರಿಂದ ಮಕ್ಕಳ ಶ್ರೇಯಸ್ಸಿನಲ್ಲಿ ತಾಯಿ ಪಾತ್ರ ಕುರಿತು ಉಪನ್ಯಾಸ, ಧರ್ಮ ಸಭೆಯಲ್ಲಿ ನ್ಯಾಯವಾದಿ ವ್ಹಿ.ಆರ್. ಗುಡಿಸಾಗರ, ಡಾ. ರಾಜಶೇಖರ ದಾನರಡ್ಡಿ ಅವರಿಂದ ವಚನ ಸಾಹಿತ್ಯದಲ್ಲಿ ಶಿವಶರಣೆಯರು ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಪ್ರತಿ ದಿನ ಜರುಗಲಿರುವ ಗೋಷ್ಠಿಗಳ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ವ್ಹಿ.ಬಿ. ಸೋಮನಕಟ್ಟಿಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಮರಣೋತ್ಸವ ಸಮಿತಿ ಗೌರವಾಧ್ಯಕ್ಷ ಹುಚ್ಚಪ್ಪ ನವಲಗುಂದ, ಅಧ್ಯಕ್ಷ ವೀರಭದ್ರಗೌಡ ಪಾಟೀಲ, ಕಾರ್ಯದರ್ಶಿ ಬಸವರಾಜ ನವಲಗುಂದ ಉಪಸ್ಥಿತರಿದ್ದರು.