ಇಂದಿನಿಂದ ಶ್ರಾವಣ ಸಂಜೆ ಪ್ರಾರಂಭ
ಲಕ್ಷ್ಮೇಶ್ವರ: ಪಟ್ಟಣದ ಸಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಕದಳಿ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಶಿರಹಟ್ಟಿ ತಾಲೂಕು ಘಟಕ, ರಾಜ ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೋಬಸ್ ಕ್ಲಬ್ ಸಂಯುಕ್ತವಾಗಿ ಶ್ರಾವಣ ಮಾಸದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಶರಣರ, ಸಂತರ, ದಾಸರ, ಮಹಾತ್ಮರ ಜೀವನ ಚರಿತ್ರೆಯ ಪ್ರವಚನ ಕಾರ್ಯಕ್ರಮ ಜು 28ರಿಂದ ಆ. 26 ರವಗೆ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಪಟ್ಟಣದ ಪರ್ವತ ಮಲ್ಲಯ್ಯನ ದೇವಸ್ಥಾನ ಹಾಗೂ ಅಕ್ಕಮಹಾದೇವಿಯ ದೇವಸ್ಥಾನದಲ್ಲಿ ನಡೆಯಲಿವೆ. ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಬನ್ನಿಕೊಪ್ಪದ ಬ್ರಹನ್ಮಠದ ಡಾ. ಸುಜ್ಞಾನದೇವ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ ನೆರವೇರಿಸಲಿದ್ದಾರೆ. ವೈರಾಗ್ಯ ನಿಧಿ ಅಕ್ಕಮಹಾದೇವಿ ಕುರಿತು ಉಪನ್ಯಾಸ ಜರುಗುತ್ತದೆ. ಅತಿಥಿಗಳಾಗಿ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಮಹಾಬಳೇಶ್ವರಪ್ಪ ಬೇವಿನಮರದ, ಬಸವರಾಜ ಕೊಟಗಿ ಆಗಮಿಸಲಿದ್ದಾರೆ ಎಂದು ಸಂಘಟಿಕರಾದ ಪ್ರೇಮಕ್ಕ ಬಿಂಕದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆಚೀಟಿ ಸಂಗ್ರಹ ಪ್ರದರ್ಶನ
ಗದಗ: ಜಿಲ್ಲಾ ಮಟ್ಟದ ಅಂಚೆ ಚೀಟಿಪ್ರದರ್ಶನವನ್ನು ಆ. 9 ಮತ್ತು 10ರಂದು ಗದಗದಲ್ಲಿ ಅಂಚೆ ಇಲಾಖೆ ಏರ್ಪಡಿಸಿದೆ. ಕಿರಿಯ ವರ್ಗ (ಪ್ರಥಮ-ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳು), ಹಿರಿಯ ವರ್ಗ (18 ವರ್ಷ ಮೇಲ್ಪಟ್ಟವರು) ಮತ್ತು ಶಾಲಾ ವಿಭಾಗ (1ರಿಂದ 10, ಪಿಯು ಹಾಗೂ 18 ವರ್ಷ ಮೇಲ್ಪಟ್ಟವರಿಗೆ) 3 ಹಂತಗಳ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆಯಲಿವೆ. ಅಂಚೆ ಚೀಟಿ ಆಸಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಅಂಚೆ ಪ್ರದರ್ಶನ ಧಾರವಾಡ, ಕಾರವಾರ, ಶಿರಸಿ, ಹಾವೇರಿ ಮತ್ತು ಬಳ್ಳಾರಿ ವಿಭಾಗಗಳ ಸಹಯೋಗದಲ್ಲಿದ್ದು, ಆ ವಿಭಾಗಗಳವರು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವ ಮಾಹಿತಿಯನ್ನು ನೀಡಲು ಆ. 5 ಕೊನೆಯ ದಿನವಾಗಿದೆ. ಭಾಗವಹಿಸುವ ಸ್ಪರ್ಧಿಗಳು ಎ-4 ಸೈಜಿನಲ್ಲಿ ಅಂಚೆ ಚೀಟಿ ಪ್ರದರ್ಶಿಸಿದ ಕನಿಷ್ಠ 16 ಶೀಟ್‌ಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಗದಗ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದ ದೂರವಾಣಿ 08372-277823 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪತ್ರಿಕಾ ದಿನಾಚರಣೆ ನಾಳೆ
ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಜು. 29ರಂದು ಸಂಜೆ 4 ಕ್ಕೆ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ನರಗುಂದ ಶಾಸಕ ಬಿ.ಆರ್. ಯಾವಗಲ್ಲ, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿಪ ಸದಸ್ಯ ಎಸ್.ವಿ. ಸಂಕನೂರ ಆಗಮಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕಾರ್ಗಿಲ್ ವಿಜಯೋತ್ಸವ ಸ್ಮರಣೆ
ನರಗುಂದ: ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಜು 28ರ ಬೆಳಗ್ಗೆ 10ಕ್ಕೆ ಕಾರ್ಗಿಲ್ ವಿಜಯೋತ್ಸವ ಸ್ಮರಣೆ ಜರುಗಲಿದೆ. ಸಮಾರಂಭಕ್ಕೆ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಶಾಸಕ ಬಿ.ಆರ್. ಯಾವಗಲ್, ತಾಲೂಕು ಮಾಜಿ ಸೈನಿಕರ ಅಧ್ಯಕ್ಷ ಪಿ.ಟಿ. ಸೂರ್ಯವಂಶಿ, ಪ್ರಾಚಾರ್ಯರು ಕೆ. ಶೇಖರಪ್ಪ, ಆರ್.ಎಲ್. ವಾಸನದ, ಎ.ಬಿ. ವಿರಕ್ತಮಠ, ಮಹೇಶ್ವರಯ್ಯ ಸುರೇಬಾನ, ಗಂಗಾಧರ ಕಂಠೆಣ್ಣವರ, ರಂಗಪ್ಪ ಆಲೂರ, ಯಶೋದಾ ಯರಗಟ್ಟಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.