ಎಲ್ಲರೂ ಒಂದೊಂದು ಗಿಡ ನೆಡಿ: ಕೆರಕಲಮಟ್ಟಿ
ಗದಗ: ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಸಸಿ ನೆಡುವ ಜತೆಗೆ ಅದನ್ನು ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನಗರಸಭೆಯಿಂದ ಕೊಡಿಸುವುದಾಗಿ ನಗರಸಭೆ ಅಧ್ಯಕ್ಷೆ ಆರ್.ವೈ. ಕೆರಕಲಮಟ್ಟಿ ಹೇಳಿದರು. ಅವರು ನಗರದ ನಗರಸಭೆಯ ಸಂಯುಕ್ತ ಪಪೂ ಕಾಲೇಜಿನಲ್ಲಿ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಹೈಸ್ಕೂಲ್ ವಿಭಾಗದ ನೂತನ ವಿಜ್ಞಾನ ಶಿಕ್ಷಕಿ ಎಸ್.ಎನ್. ದೊಡ್ಡವಾಡ ಮಾತನಾಡಿ, ಇತ್ತೀಚೆಗೆ ಗಿಡ-ಮರಗಳ ಕೊರತೆಯಿಂದಾಗಿ ಹಸಿರು ಮನೆ ಪರಿಣಾಮ, ಜಾಗತಿಕ ತಾಪಮಾನ, ಓಝೋನ್ ಪದರದ ವಿನಾಶ ಮುಂತಾದ ದುಷ್ಪರಿಣಾಮ ಹೆಚ್ಚಾಗಿವೆ. ಆದ್ದರಿಂದ ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ಅದನ್ನು ತಪ್ಪಿಸಬೇಕು ಎಂದರು.
ಅರಣ್ಯಾಧಿಕಾರಿ ಡಿ.ಎನ್. ಅಗೋರಿ, ಅನ್ನದಾನಿ ಹಿರೇಮಠ, ಪ್ರಾ. ಕೆ.ಎಸ್. ಬಡಿಗೇರ ಮಾತನಾಡಿದರು. ಇನ್ನರ್ ವೀಲ್ ಕ್ಲಬ್ ಸದಸ್ಯೆ ಸುನಂದಾ ಮಾಳೆಕೊಪ್ಪಮಠ, ಪ್ರಿಯಾಂಕಾ ಪತ್ರಿ ಮತ್ತು ಲಕ್ಷ್ಮಿ ಗೋಂದಿವಯರ ಪ್ರಾರ್ಥಿಸಿದರು.