ಧರ್ಮ ಬದುಕಿಗೆ ದಾರಿದೀಪ: ಕವಿತಾ
ಗದಗ: ಧರ್ಮ ಮತ್ತು ಧರ್ಮ ಗ್ರಂಥಗಳು ಮನುಷ್ಯನಿಗೆ ಬದುಕುವ ಸನ್ಮಾರ್ಗವನ್ನು ಸುಗಮಗೊಳಿಸುವ ದಾರಿದೀಪಗಳಾಗಿವೆ. ಧರ್ಮ, ನ್ಯಾಯ, ನೀತಿಯಿಂದ ಬದುಕು ನಡೆಸುವವರಿಗೆ ಜೀವನದಲ್ಲಿ ಯಶಸ್ಸು ಮತ್ತು ಸದ್ಗತಿ ದೊರೆಯಲು ಸಾಧ್ಯ ಎಂದು ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಅಭಿಪ್ರಯ ಪಟ್ಟರು.
ಅವರು ಶನಿವಾರ ನಗರದಲ್ಲಿ ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆ ಮತ್ತು ಖಾದ್ರಿಯಾ ಡ್ರಿಪ್ ಇರಿಗೇಶನ್ ಸಿಸ್ಟ್ಂ ಸಂಘಟನೆಯ ಆಶ್ರಯದಲ್ಲಿ ರಂಜಾನ್ ಹಾಗೂ ಶ್ರಾವಣಮಾಸದ ಹಿನ್ನೆಲೆಯಲ್ಲಿ ಬಡ ಮಹಿಳೆಯರಿಗೆ ಬಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆ ಅಧ್ಯಕ್ಷ ಫರೀದಅಹ್ಮದ್ ಸುಂಕದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹೇಗೆ ಪವಿತ್ರ ಹಬ್ಬವೂ ಹಾಗೆ ಹಿಂದೂಗಳಿಗೆ ಶ್ರಾವಣಮಾಸವೂ ಅಷ್ಟೇ ಪವಿತ್ರ ಹಬ್ಬವಾಗಿದೆ. ಧರ್ಮ ಮತ್ತು ಆಚರಣೆ ವಿಭಿನ್ನವಾಗಿದ್ದರೂ ಉದ್ದೇಶ ಒಂದೇ ಆಗಿದೆ. ದೇವರನ್ನು ಆರಾಧಿಸುವ, ವಿಶೇಷ ಪೂಜೆ, ಪ್ರಾರ್ಥನೆ, ಉಪವಾಸವನ್ನು ಮಾಡುವ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ನೆಮ್ಮದಿಯನ್ನು ತಂದುಕೊಳ್ಳುವದಾಗಿದೆ ಎಂದರು. ಮುಸ್ಲಿಂ ಜಾಗ್ರತ ವೇದಿಕೆಯ ಜಿಲ್ಲಾಧ್ಯಕ್ಷ ನೂರಅಹ್ಮದ್ ಖಾದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಲ್ಲಾ ಮಾತನಾಡಿದರು. ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬಾಬಾಜಾನ ಶಿರಹಟ್ಟಿ, ಮಹ್ಮದಗೌಸ್ ಖಾದ್ರಿ, ಮಹ್ಮದ್ ಇಸಾಕ ದೊಡ್ಡಮನಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಮಹಿಳೆಯರಿಗೆ ಬಟ್ಟೆ ವಿತರಿಸಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವಂತೆ ಶುಭ ಹಾರೈಸಲಾಯಿತು. ಎಂ.ಐ. ಮುಲ್ಲಾ ನಿರೂಪಿಸಿದರು.