ನವೋದಯ ವಿದ್ಯಾಲಯಕ್ಕೆ ನೀರು ಘಟಕ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 27
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಹತ್ತಿರವಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ತಿಂಗಳೊಳಗೆ ರು. 5-6 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುವುದು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಭಾನುವಾರ ಬೆಳಗ್ಗೆ ತಾಲೂಕಿನ ಕೊರ್ಲಹಳ್ಳಿ ಹತ್ತಿರವಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನಂತರ ಜರುಗಿದ ನಿವೃತ್ತ ಪ್ರಾಚಾರ್ಯ ಬಿ. ಕಲ್ಯಾಣಿ ಅವರ ಬೀಳ್ಕೊಡುವ ಹಾಗೂ ನೂತನ ಪ್ರಾಚಾರ್ಯರ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ಪಾಲಕರಿಂದ ಕೇಳಿ ಬರುತ್ತಿದ್ದು, ನೀರು ಸಮಸ್ಯೆ ಪರಿಹರಿಸುವ ಉದ್ದೇಶದಿಂದ 3 ಕೊಳವೆಬಾವಿಗಳನ್ನು ಕೊರೆಸಿದ್ದು, ಅದರಲ್ಲಿ ಒಂದು ಕೊಳವೆಬಾವಿಯಿಂದ ಉತ್ತಮವಾಗಿ ನೀರು ಬರುತ್ತಿದೆ. ಇದೇ ನೀರು ಬಳಸಿ ಶುದ್ಧ ಕುಡಿಯುವ ನೀರಿನ ಘಟಕನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ವಿದ್ಯಾಲಯಕ್ಕೆ ಸಭಾಭವನದ ಅವಶ್ಯಕತೆ ಇರುವ ಬಗ್ಗೆಯೂ ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಜತೆ ಮಾತನಾಡಿ, ಇಲ್ಲೊಂದು ಸುಸಜ್ಜಿತ ಸಭಾಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ನಿವೃತ್ತ ಪ್ರಾಚಾರ್ಯ ಬಿ. ಕಲ್ಯಾಣಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ತಾಲೂಕಿನ ಸೇವೆ ನನಗೆ ತೃಪ್ತಿ ತಂದಿದೆ ಎಂದರು.
ಗದಗ ಕೆವಿಎಸ್‌ಆರ್ ಕಾಲೇಜಿನ ಪ್ರೊ. ಅನಿಲ್ ವೈದ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಗಮಿಸಿದ ಪ್ರಾಚಾರ್ಯ ಕೆ. ಸುಭಾಷಿಣಿ ಅವರನ್ನು ಸನ್ಮಾನಿಸಲಾಯಿತು. ಮುಂಡರಗಿ ಜ. ನಾಡೋಜ. ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಪಾಲಕರ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರೊ. ಎಸ್.ಎಂ. ಹೊಸಮಠ ಕಾರ್ಯಕ್ರಮ ನಿರೂಪಿಸಿದರು.