ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶರಣರ ತತ್ವಾದರ್ಶ ಪಾಲಿಸಿ

Lingaraj Badiger
Updated On : 28 Jul 2014, 10:44 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 27
12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಅನೇಕ ಅಂಕು ಡೊಂಕುಗಳನ್ನು ತಿದ್ದುವ ಮಹತ್ಕಾರ್ಯವನ್ನು ಮಾಡಿದರು. ಶರಣರ ಹಾದಿಯಲ್ಲಿ ನಡೆಯಬೇಕಿರುವುದು ನಮ್ಮ ಧರ್ಮ. ಆದರೆ ಇಂದಿನ ಯುವ ಸಮೂಹ ತಮ್ಮ ಮನಸ್ಸು ಬೇರೆಡೆಗೆ ತಿರುಗಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ ಗದಗ ಹಾಗೂ ಬಿಜಾಪುರದ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಸಂಜೆ ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಒಂದು  ತಿಂಗಳ ಕಾಲ ಜರುಗಿದ ಶರಣರ ತತ್ವ ದರ್ಶನ ಪ್ರವಚನ ಮಹಾಮಂಗಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾತ್ತಿದ್ದರು.
ಇಂದಿನ ಯುವ ಜನಾಂಗದಲ್ಲಿ ಸಂಯಮ ಕಡಿಮೆಯಾಗುತ್ತಿದ್ದು, ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಸಂಯಮ ಸಂಸ್ಕೃತಿಯನ್ನು ಮತ್ತೆ ಬೆಳೆಸಬೇಕಾದರೆ ಬಸವಣ್ಣನಂತಹ ಮಹಾಪುರುಷರ ತತ್ವ ದರ್ಶನ ಅವಶ್ಯವಾಗಿ ಬೇಕು ಎಂದರು.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ಮೃಗಗಳಂತೆ, ಪಶುಗಳಂತೆ ಅತ್ಯಾಚಾರ ಅನೈತಿಕ ಮಾರ್ಗಗಳತ್ತ ನಡೆಯುತ್ತಿದ್ದಾರೆ. ಈ ಕೃತ್ಯಗಳಲ್ಲಿ ಅವಿದ್ಯಾವಂತರ ಜೊತೆಗೆ ವಿದ್ಯಾವಂತರೂ ಸೇರಿಕೊಂಡಿರುವುದು ವಿಪರ್ಯಾಸವಾಗಿದೆ. ಇಂತಹ ಸಂದರ್ಭಗಳಲ್ಲಿ ಪ್ರತಿ ವಿದ್ಯಾರ್ಥಿಗಳನ್ನು ಚರಿತ್ರೆಯ ನಿರ್ಮಾಪಕರನ್ನಾಗಿ ಮಾಡುವ ಕೆಲಸ ನಡೆಯಬೇಕಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಜ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಇಂದು ಲಿಂಗಾಯತರು ವಿಚಾರವಂತಿಕೆಯಲ್ಲಿ ಹಿಂದೆ ಉಳಿಯುತ್ತಿರುವುದು ವಿಷಾದಕರ ಸಂಗತಿ. ಈಚೆಗೆ ತಂಗಡಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಹಾಗೂ ನೀಲಾಂಬಿಕೆ ಭಾವಚಿತ್ರದ ಪುತ್ಥಳಿ ಅನಾವರಣದ ಸಂದರ್ಭದಲ್ಲಿ ಅಲ್ಲಿನ ಕೆಲವು ಲಿಂಗಾಯತರೇ ಕೇವಲ ನೀಲಾಂಬಿಕೆಯ ಪುತ್ಥಳಿಯನ್ನು ಮಾತ್ರ ನಿರ್ಮಿಸಿ ಹಡಪದ ಅಪ್ಪಣ್ಣನವರ ಪುತ್ಥಳಿ ಅನಾವರಣ ಬೇಡ ಎಂದು ವಿರೋಧ ವ್ಯಕ್ತಪಡಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಎಲ್ಲ ಪ್ರವಚನಗಳ ಸಾರವೆಂದರೆ ವಿಚಾರ. ಲಿಂಗಾಯತರಲ್ಲಿನ ಕೆಟ್ಟ ವಿಚಾರಗಳು ಹೋಗಬೇಕಾದರೆ ಇಂತಹ ಶರಣರ ತತ್ವದರ್ಶನ ಅವಶ್ಯವಾಗಿದೆ ಎಂದರು.
ಕೊಪ್ಪಳ ವಿಶ್ರಾಂತ ಪ್ರಾಚಾರ್ಯ ಅಲ್ಲಮಪ್ರಭು ಬೆಟದೂರ, ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ನವದೆಹಲಿಯ ಮಹಾಂತ ದೇವರು ಶರಣರ ತತ್ವದರ್ಶನ ಪ್ರವಚನ ಮಾಡಿ ಮಹಾಮಂಗಲಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ಕಲ್ಯಾಣ ಕೇಂದ್ರ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಪ್ರವಚನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಎ.ಪಿ. ದಂಡಿನ, ಅಶೋಕ ಹುಬ್ಬಳ್ಳಿ,  ಕೊಟ್ರಯ್ಯ ಅಮರಗೋಳ ಹಿರೇಮಠ, ಗಿರೀಶಗೌಡ ಪಾಟೀಲ, ಈಶಣ್ಣ ಬೆಟಗೇರಿ, ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ವಿಜಯಕುಮಾರ ಬಣಕಾರ ಉಪಸ್ಥಿತರಿದ್ದರು.
ಡಿ.ಡಿ. ಮೋರನಾಳ ಸ್ವಾಗತಿಸಿ, ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ. ಮುಲ್ಲಾನವರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement