ಶಾಂತಿಯುತ ರಂಜಾನ್, ಪಂಚಮಿ: ಮನವಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 27
ಜು. 29ರಂದು ಜರುಗಲಿರುವ ರಂಜಾನ್ ಹಾಗೂ ಮೂರು ದಿನಗಳ ಕಾಲ ಜರುಗಲಿರುವ ನಾಗರ ಪಂಚಮಿ ಹಬ್ಬವನ್ನು ಮುಂಡರಗಿ ಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಸೇರಿ ಶಾಂತಿ, ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಮುಂಡರಗಿ ಠಾಣೆ ಪಿಎಸ್‌ಐ ಎಸ್.ಆರ್. ನಾಯಕ ಮನವಿ ಮಾಡಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ಹಿಂದೂ-ಮುಸ್ಲಿಂ, ಇತರ ಸಮಾಜದ ಮುಖಂಡರ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಮುಂಡರಗಿ ಪಟ್ಟಣ ಹಿಂದಿನಿಂದಲೂ ಕೋಮುಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ರಂಜಾನ್, ನಾಗರ ಪಂಚಮಿ ಹಬ್ಬಗಳಲ್ಲಿ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಬೇಕು. ಈ ಸಮಯದಲ್ಲಿ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆ ವಹಿಸುವಂತೆ ಕೋರಿದರು.
ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಸುತ್ತಮುತ್ತ ಕೆಲವು ಹುಡುಗರು ನಿತ್ಯ ಯುವತಿಯರನ್ನು ಚುಡಾಯಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಎಲ್ಲ ಶಾಲಾ-ಕಾಲೇಜುಗಳ ಸುತ್ತ ಪೊಲೀಸ್ ಕಣ್ಗಾವಲು ಇಡಲಾಗಿದೆ. ಪಾಲಕರೂ ಶಾಲಾ-ಕಾಲೇಜುಗಳಿಗೆ ತೆರಳುವ ತಮ್ಮ ಮಕ್ಕಳಿಗೆ ಮೊಬೈಲ್ ನೀಡಬಾರದು. ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸುವುದು ಅವಶ್ಯ ಎಂದು ಹೇಳಿದರು. ಹಲವು ಬೈಕ್ ಸವಾರರು ಲೈಸೆನ್ಸ್ ಹೊಂದಿಲ್ಲ. ಇನ್ನು ಕೆಲವು ಕಾರುಗಳಿಗೆ ನಂಬರ್ ಪ್ಲೇಟ್ ಇಲ್ಲ. ಕೆಲವು ಬೈಕ್‌ಗಳಲ್ಲಿ ರಾಜಾರೋಷವಾಗಿ ಮೂರು ಜನ, ನಾಲ್ಕು ಜನ ಓಡಾಡುತ್ತಿದ್ದಾರೆ. ಸಂಚಾರಿ ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಅಂಜುಮನ್ ಕಮಿಟಿ ಮುಖಂಡ ನಬೀಸಾಬ್ ಕೆಲೂರ ಮಾತನಾಡಿ, ಹಬ್ಬ ಶಾಂತಿಯುತವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಪ್ರಭು ಅಬ್ಬೀಗೇರಿ ಮಾತನಾಡಿ, ನಿತ್ಯ ಶಾಲಾ-ಕಾಲೇಜು ಪ್ರಾರಂಭವಾಗುವ ಹಾಗೂ ಬಿಡುವ ಸಮಯದಲ್ಲಿ ಬಸ್ ನಿಲ್ದಾಣದಿಂದ ಕಾಲೇಜುವರೆಗೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಮಾಡಬೇಕು. ಮಹಿಳಾ ವಸತಿ ನಿಲಯಗಳ ಸುತ್ತಮುತ್ತಲೂ ಲಕ್ಷ್ಯ ವಹಿಸಬೇಕು ಎಂದು ಮನವಿ ಮಾಡಿದರು. ಎಎಸ್‌ಐ ಬಿ.ಎಂ. ಪೂಜಾರ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಚಂದ್ರಶೇಖರ ಬಡಿಗೇರಿ, ರಾಘವೇಂದ್ರ ಕುರಿಯವರ, ಸುರೇಶ ಮಾಳೇಕೊಪ್ಪ, ಪರಶುರಾಮ ಕರಡಿಕೊಳ್ಳ, ಅಬ್ದುಲ್ ಖುರೇಶಿ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ನವಲಗುಂದ, ಲಕ್ಷ್ಣಣ ಮುಂಡವಾಡ, ಲಕ್ಷ್ಮಣ ತಗಡಿನಮನಿ, ಅಂದಾನಗೌಡ ಕುಲಕರ್ಣಿ ಉಪಸ್ಥಿತರಿದ್ದರು.