ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹತ್ತಿ ಬೆಳೆಗಾರರಿಗೆ ಆಪತ್ತು

Lingaraj Badiger
Updated On : 28 Jul 2014, 10:40 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 27
ಬಿಟಿ ಹತ್ತಿ ಬೆಳೆದು ಲಾಭ ಮಾಡಿಕೊಳ್ಳಬೇಕು ಎನ್ನುವ ಕನಸು ಕಾಣುತ್ತಿದ್ದ ಲಕ್ಷ್ಮೇಶ್ವರ ಹೋಬಳಿಯ ರೈತರಿಗೆ ನಿರಾಶೆ ಕಾದಿದೆ.
ಹತ್ತಿ ಬೆಳೆ ಹೂವುಗಳು ಅರಳಿ ಕಾಯಿ ಕಟ್ಟುವ ಹಂತಕ್ಕೆ ಹೊರಳತ್ತಿರುವಾಗ ಹೂವುಗಳು ಉದುರಿ ನೆಲಕ್ಕೆ ಬೀಳುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೂ ಕೃಷಿ ಅಧಿಕಾರಿಗಳು ಇತ್ತ ಕಣ್ಣು ಹಾಯಿಸುತ್ತಿಲ್ಲವೆಂಬುದು ರೈತರ ಆರೋಪವಾಗಿದೆ.
ಸಮೀಪದ ಶಿಗ್ಲಿ ಗ್ರಾಮದ ಶಿವಾನಂದ ಮೂಲಿಮನಿ ಅವರ 3 ಎಕರೆ ನೀರಾವರಿ ಭೂಮಿಯಲ್ಲಿ ಏಪ್ರಿಲ್ 20 ರಂದು ಜಾದೂ ತಳಿಯ ಬಿಟಿ ಹತ್ತಿ ಬಿತ್ತನೆ ಮಾಡಿದ್ದಾರೆ. ಬೆಳೆಯು ಎದೆಯ ಮಟ್ಟಕ್ಕೆ ಬೆಳೆದು ನೋಡಲು ಸೊಗಸಾಗಿ ಕಾಣುತ್ತಿದೆ. ಬೆಳೆಯಲ್ಲಿ ಈಗಾಗಲೆ 10-15 ಕಾಯಿಗಳನ್ನು ಕಟ್ಟಿದೆ. ಆದರೆ, ಈಗ ಹತ್ತಿಯ ಬೆಳೆಯಲ್ಲಿನ ಹೂವುಗಳು ಅರಳಿ ಕಾಯಿ ಕಟ್ಟುವ ಹಂತಕ್ಕೆ ಹೊರಳಬೇಕಾಗಿತ್ತು. ಈ ಹಂತದಲ್ಲಿ ಹೂವುಗಳು ಕಾಯಿ ಆಗುವ (ಮೋಪು ಕಟ್ಟುವ) ಸಮಯದಲ್ಲಿ ಉದುರುತ್ತಿವೆ.
ಇದರಿಂದ ಕಾಯಿ ಕಡಿಮೆಯಾಗಿ ಹತ್ತಿ ಪ್ರಮಾಣವು ಕುಂಠಿತಗೊಂಡು ಆದಾಯಕ್ಕೆ ಹೊಡೆತ ತರುವ ಅಪಾಯವಿದೆ ಎನ್ನುತ್ತಾರೆ ರೈತರು. ಬೀಜ, ಗೊಬ್ಬರ, ಔಷಧ ಸಿಂಪರಣೆ, ಬೆಳೆಯಲ್ಲಿನ ಕಳೆ ಕೀಳಲು ಮತ್ತು ಆಳುಗಳ ಕೂಲಿಗಾಗಿ ಸಾವಿರಾರು ರುಪಾಯಿ ಸಾಲ ಮಾಡಿ ಖರ್ಚು ಮಾಡಿದ್ದೇವೆ. ಹೀಗೆ ಬೆಳೆಯಲ್ಲಿನ ಹೂವುಗಳು ಉದುರಿ ಹೋಗುತ್ತಿರುವುದು ರೈತರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಕೃಷಿ ಅಧಿಕಾರಿಗಳು ಈ ಬಗ್ಗೆ ಮಾಹಿತಿಯನ್ನು ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತ ಶಿವಾನಂದ ಮೂಲಿಮನಿ.
ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಬೆಳೆಯಾದ ಹೆಸರು ಬೆಳೆಗೆ ಈಗ ಎಲೆ ಹಳದಿ ರೋಗವು ಕಾಣಿಸಿಕೊಂಡು ಬೆಳೆಯ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಕಾಯಿಗಳು ಕಟ್ಟುವಲ್ಲಿ ತೊಂದರೆ ಉಂಟು ಮಾಡುತ್ತಿದೆ. ಬೆಳೆಗೆ ಬರುವ ನಾನಾ ರೋಗಗಳು ರೈತರ ಖುಷಿಯನ್ನು ಕಸಿದುಕೊಂಡು ಕೃಷಿಯಿಂದ ಹಿಮ್ಮುಖವಾಗುವಂತೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement