ವ್ಯಾಪಾರಿಯ ಕೈ ಹಿಡಿದ ಕೃಷಿ!
ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 28
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ವಿರೂಪಾಕ್ಷಪ್ಪ ನಂದೆಣ್ಣವರ, ಲಾಭಕೊಡುತ್ತಿದ್ದ ವ್ಯಾಪಾರವನ್ನು ಕೈಬಿಟ್ಟು ಕೃಷಿ ಮಾಡುತ್ತಿದ್ದು, ಅಲ್ಲೂ ಕೂಡಾ ಯಶಸ್ವಿಯಾಗಿದ್ದಾನೆ.
ಯುವಕ ವಿರೂಪಾಕ್ಷಪ್ಪ ನಂದೆಣ್ಣವರ ಬೆಳ್ಳಟ್ಟಿಯಲ್ಲಿ ಭರ್ಜರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೆಲ ವ್ಯಾಪಾರಿಗಳಿಗೆ ಒಳಗೊಳಗೆ ಹೊಟ್ಟೆಕಿಚ್ಚು ಪ್ರಾರಂಭವಾಗಿ ಒಂದಿಲ್ಲೊಂದು ಮೋಸದಲ್ಲಿ ಅವರನ್ನು ಸಿಲುಕಿಸುವ ಜಾಲ ಹುಟ್ಟಿಕೊಂಡಿತು. ವಿಷಯ ತಿಳಿದ ವಿರೂಪಾಕ್ಷಪ್ಪ ವ್ಯಾಪಾರ ಕೈಬಿಟ್ಟು, ಪಿತ್ರಾರ್ಜಿತ ಆಸ್ತಿಯಾದ 40 ಎಕರೆ ಹೊಲದಲ್ಲಿ ಕೃಷಿ ಶುರು ಮಾಡಿದಾಗ ಕೆಲವರಿಗೆ ಅಚ್ಚರಿಯಾಗಿದೆ.
4 ಎಕರೆಯಲ್ಲಿ ಕೊಳವೆಬಾವಿ ಕೊರೆಸಿ ಹನಿ ನೀರಾವರಿ ಮಾಡಿ ಪಪ್ಪಾಯಿ ಬೆಳೆಯ ಬೇಕೆಂದು ದೂರದ ಸೊಲ್ಲಾಪುರದಿಂದ ಪಪ್ಪಾಯಿ ಸಸಿ ತಂದು ನಾಟಿ ಮಾಡಿದ್ದಾರೆ. ಹೊಂಡವನ್ನು ನಿರ್ಮಿಸಿ ಅದರಲ್ಲಿ ಕೊಳವೆಬಾವಿ ನೀರು ಸಂಗ್ರಹಿಸಿ ಪೈಪ್ಗಳ ಮೂಲಕ ಹಾಯಿಸಿದ್ದಾರೆ.
ಈಗ ಪ್ರತಿ ಗಿಡವು 30-40 ಕೆಜಿ ಹಣ್ಣು ನೀಡುತ್ತಿದೆ. ಹೀಗಾಗಿ ನನಗೆ ನಷ್ಟದ ಮಾತಿಲ್ಲ. ಈಗಾಗಲೇ ಸುಮಾರು ರು. 2.50 ಲಕ್ಷ ಪಪ್ಪಾಯಿ ಹಣ್ಣು ಮಾರಾಟದಿಂದ ಬಂದಿದೆ. ಇನ್ನೂ ಒಂದುವರೆ ವರ್ಷದವರೆಗೆ ಗಿಡಗಳು ಹಣ್ಣು ಬಿಡುತ್ತವೆ. ಸುಮಾರು 2 ವರ್ಷಗಳವರೆಗೆ ಕಾಯಿ ಬಿಡುತ್ತಿದ್ದು, 4 ಎಕರೆ ಹೊಲದಲ್ಲಿ ರು. 10 ಲಕ್ಷ ಲಾಭ ಕಟ್ಟಿಟ್ಟ ಬುತ್ತಿ, ಪಪ್ಪಾಯಿ ಗಿಡಗಳ ನಡುವೆ ದಾಳಿಂಬೆ ಸಸಿಗಳನ್ನು ನೆಟ್ಟಿದ್ದು 2 ವರ್ಷಗಳ ನಂತರ ದಾಳಿಂಬೆ ಗಿಡ ಹಣ್ಣು ಬಿಡುತ್ತದೆ. ಇದರಿಂದ ಇನ್ನೂ ಲಕ್ಷಾಂತರ ಹಣ ಗಳಿಸಬಹುದಾಗಿದೆ. ಇದಕ್ಕೆ ಯಾರ ಹಂಗು ಇಲ್ಲ ಎನ್ನುತ್ತಾನೆ ಯುವಕ. ತಾನು ಕೃಷಿಕನಾಗಲು ಚಿಂತನೆ ನಡೆಸಿದಾಗ ಚಿಕ್ಕ ಸವಣೂರಿನ ರೈತ ನೀಲಪ್ಪಗೌಡ ಪಾಟೀಲ ಹಾಗೂ ಶಿರಹಟ್ಟಿ ತಾಲೂಕು ತೋಟಗಾರಿಕೆಯ ಇಲಾಖೆಯ ಅಧಿಕಾರಿ ಸುರೇಶ ಕುಂಬಾರ ಮತ್ತು ತನ್ನ ಸಹೋದರರ ಸಹಕಾರ ಪ್ರೋತ್ಸಾಹ ಮರೆಯುವುದಿಲ್ಲ ಎನ್ನುತ್ತಾನೆ.
ಎಕರೆ ಹೊಲದಲ್ಲಿ 800 ಸಸಿಗಳಂತೆ ಒಟ್ಟು 3200 ಸಸಿಗಳನ್ನು 9 ತಿಂಗಳ ಹಿಂದೆ ನಾಟಿ ಮಾಡಿದ್ದರು. 9 ತಿಂಗಳ ನಂತರ ಪಪ್ಪಾಯಿ ಹಣ್ಣುಗಳು ಗಿಡದ ತುಂಬ ತೊನೆದಾಡುತ್ತಿರುವುದನ್ನು ನೋಡಿದರೆ ಹಸಿದ ಹೊಟ್ಟೆ ತುಂಬುತ್ತದೆ. ಈ ಸಂತೋಷ ಒಮ್ಮೆಲೆ ಬಂದಿಲ್ಲ. ಪಪ್ಪಾಯಿ ಬೆಳೆ ಮಗುವಿಗಿಂತ ಹೆಚ್ಚಾಗಿ ಆರೈಕೆ ಮಾಡಿದ್ದು, ಪ್ರತಿ ಎಕರೆಗೆ ರು. 80 ಸಾವಿರದಂತೆ 3.50 ಲಕ್ಷ ಖರ್ಚು ಮಾಡಲಾಗಿದೆ.
- ವಿರೂಪಾಕ್ಷಪ್ಪ ನಂದೆಣ್ಣವರ,
ಪಪ್ಪಾಯಿ ಬೆಳೆದ ಯುವಕ