ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅರಿಷಡ್ವರ್ಗ ತೊರೆದರೆ ಬೆಳವಣಿಗೆ ಸಾಧ್ಯ

Lingaraj Badiger
Updated On : 30 Jul 2014, 10:45 am

ಕನ್ನಡಪ್ರಭ ವಾರ್ತೆ, ಗದಗ, ಜು. 29
ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಈ ಆರು ಗುಣಗಳು ವೈರಿಯಂತೆ ಕಾಡುತ್ತವೆ. ಇವುಗಳನ್ನು ಗೆಲ್ಲಿ ಮುಂದೆ ಸಾಗುವವನೆ ಕ್ರಿಯಾಶೀಲ ವ್ಯಕ್ತಿಎನಿಸಿಕೊಳ್ಳುತ್ತಾನೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ಈಚೆಗೆ ನಗರದ ಪಂ. ಪಂಚಾಕ್ಷರ ಗವಾಯಿಗಳವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ 2014-15 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಮವೆಂದರೆ ಐಹಿಕ ಸುಖಗಳನ್ನು ಬಯಸುವದು, ಕ್ರೋಧವೆಂದರೆ ಸಿಟ್ಟು ಸಾತ್ವಿಕ ಗುಣದ ವಿರುದ್ಧವಾದುದು, ಲೋಭವೆಂದರೆ ದುರಾಸೆ, ಮೋಹವೆಂದರೆ ಸತಿ ಸುತರು, ಧನ ಧಾನ್ಯ ಸಂಪತ್ತು ಮದವೆಂದರೆ ರೂಪದ ಮದ, ಯೌವನ ಮದ, ಬಲದ ಮದ, ಮತ್ಸರವೆಂದರೆ ಹೊಟ್ಟೆ ಕಿಚ್ಚು. ವ್ಯಕ್ತಿಯ ಇವುಗಳನ್ನು ಹತೋಟಿಯಲ್ಲಿಟ್ಟುಕೊಂಡು ಜೀವನ ಸಾಗಿಸಿದಾಗಲೇ ಅವನ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದರು.ಧರ್ಮವೆಂದರೆ ಜಾತಿಯಲ್ಲ ಧರ್ಮವೆಂದರೆ ಮಾನವೀಯತೆ, ಈ ಮಾನವೀಯತೆಯ ಪಾಠ ಇಂದಿನ ಮಕ್ಕಳಿಗೆ ಅವಶ್ಯವಿದೆ. ಈ ದಿಸೆಯಲ್ಲಿ ಶಿಕ್ಷಕರಾದವರು ಪಠ್ಯೇತರ ಚಟುವಟಿಕೆ ಕಲಿಸುವ ಸಮಯದಲ್ಲಿ ಈ ಮಾನವೀಯತೆಯ ಪಾಠಗಳನ್ನು ಕಲಿಸಿದಾಗಲೇ ಸಮಾಜದಲ್ಲಿ ಆ ಮಗು ಉತ್ತಮ ವ್ಯಕ್ತಿಯೆನಿಸಿಕೊಳ್ಳುತ್ತಾನೆ ಎಂದರು.
ಅತಿಥಿಗಳಾಗಿ ಆಗಮಿಸಿದ ಗದಗ ಶಹರ ವಲಯದ ಯು.ಆರ್.ಸಿಯ ಸಮನ್ವಯಾಧಿಕಾರಿ ಎಂ.ಪಿ. ಚಿಂಚೆವಾಡಿ ಮುಂತಾದವರು ಮಾತನಾಡಿದರು. ಪಿ.ಪಿ.ಜಿ. ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಎ.ಎಸ್. ಮುನೇನಕೂಪ್ಪ, ಬಿ.ಎಸ್. ಕಣವಿ ಆರ್.ಎನ್. ಪಾಟೀಲ, ಬಿ.ಎಂ. ನಂದೆಣ್ಣನವರ, ಕೆ.ಎಚ್. ದಂಡಗಿದಾಸರ ಇದ್ದರು. ಶಾಲಾ ಮುಖ್ಯಾಧ್ಯಾಪಕ ಕೆ.ಬಿ. ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಯು.ಎಂ. ವಾಲ್ಮೀಕಿ ನಿರೂಪಿಸಿದರು. ಎ.ಬಿ. ಸೊನ್ನದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement