ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾದ್ಯಂತ ನಾಗಪಂಚಮಿ ಆಚರಣೆ

Mainashree
Updated On : 1 Aug 2014, 10:08 am

ಗದಗ: ನಾಗಪಂಚಮಿಯನ್ನು ಮಹಿಳೆಯರು ಜಿಲ್ಲಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಜಿಟಿ, ಜಿಟಿ ಮಳೆಯಲ್ಲಿಯೇ ಮಹಿಳೆಯರು ಮಕ್ಕಳು ಕೈಯಲ್ಲಿ ನಾಗದೇವರಿಗೆ ಬೇಕಾಗುವ ಪೂಜೆಯ ವಸ್ತುಗಳು, ನೈವೇದ್ಯಕ್ಕೆ ಬೇಕಾಗುವ ಸಾಮಗ್ರಿಗಳೊಂದಿಗೆ ನಾಗದೇವರ ಕಟ್ಟೆಗಳಿಗೆ ತೆರಳಿ ಹಾಲು ಹಾಕುವ ಮೂಲಕ ನಾಗಪಂಚಮಿ ಆಚರಿಸಿದರು.
ಬೆಲೆ ಏರಿಕೆಯ ಬಿಸಿ: ಗಂಡನ ಮನೆಗೆ ಹೋದ ಪ್ರತಿ ಮಹಿಳೆಯರು ನಾಗಪಂಚಮಿಯನ್ನು ತವರು ಮನೆಯಲ್ಲಿಯೇ ಮಾಡಬೇಕು ಎನ್ನುವ ಸಂಪ್ರದಾಯ ಉತ್ತರ ಕರ್ನಾಟಕ ಭಾಗದಲ್ಲಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸಹೋದರಿಯರನ್ನು ಮನೆಗೆ ಕರೆಯಿಸಿ, ಹಬ್ಬ ಆಚರಿಸುವ ಮೂಲಕ ಅವರಿಗೆ ಹೊಸ ಬಟ್ಟೆ ಹಾಗೂ ನಾನಾ ನಮೂನೆ ತಿನಿಸುಗಳನ್ನು (ಉಂಡೆ) ನೀಡುವುದು ವಾಡಿಕೆ. ಉಳ್ಳವರು ದೊಡ್ಡ ಪ್ರಮಾಣದಲ್ಲಿ ಹಬ್ಬ ಆಚರಣೆ ಮಾಡಿದರೆ ಬಡವರು ತಕ್ಕ ಮಟ್ಟಿಗೆ ಹಬ್ಬ ಆಚರಣೆ ಮಾಡಿದ್ದು ಪ್ರತಿಯೊಬ್ಬರಿಗೂ ಬೆಲೆ ಏರಿಕೆಯ ಬಿಸಿ ನಾಗಪಂಚಮಿಗೆ ತಟ್ಟಿದೆ.
ಮಳೆ ನಿರೀಕ್ಷೆಯಲ್ಲಿ: ಹಬ್ಬದ ಸಡಗರ ಒಂದೆಡೆಯಾದರೆ, ಇನ್ನೊಂದೆಡೆ ಕೃಷಿಯನ್ನೇ ಕುಟುಂಬದ ಆದಾಯದ ಮೂಲವನ್ನಾಗಿ ನಂಬಿರುವ ಜಿಲ್ಲೆಯ ರೈತಾಪಿ ಜನರು, ಇನ್ನಾದರೂ ಉತ್ತಮವಾದ ಮಳೆಯಾಗಲಿ, ಅಂದಾಗ ಮಾತ್ರ ಹೊಲದಲ್ಲಿ ಬಿತ್ತನೆ ಮಾಡಿರುವ ಬೆಳೆ ಕೈ ಸೇರಲು ಸಾಧ್ಯ. ಇನ್ನು ಬಿತ್ತನೆ ಮಾಡಬೇಕಾಗಿರುವ ಬೆಳೆಗಳು ಬಹಳಷ್ಟಿದ್ದು. ಜನತೆ ಮಳೆಯಾಗಿಲ್ಲ ಎನ್ನುವ ಕೊರಗಿನಲ್ಲಿಯೇ ಹಬ್ಬ ಆಚರಣೆ ಮಾಡುತ್ತಿದ್ದು, ಮಳೆ ಕೊರತೆ ಹಬ್ಬದ ಸಡಗರಕ್ಕೆ ಕೊಂಚ ಬ್ರೇಕ್ ಹಾಕಿದೆ ಎಂದರೂ ತಪ್ಪಾಗಲಾರದು.
ಎಲ್ಲೆಡೆ ಪೂಜೆ: ಗದಗ ಬೆಟಗೇರಿಯ ರಂಗಪ್ಪಜ್ಜನ ಮಠದ ಹತ್ತಿರ ಇರುವ ನಾಗದೇವತೆ ಕಟ್ಟೆ ಸೇರಿದಂತೆ ನಾನಾ ನಾಗದೇವರ ಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸುವುದರೊಟ್ಟಿಗೆ, ತಮ್ಮ ಮನೆ ದೇವರಿಗೆ ಗುರುವಾರ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸುವುದು ಎಲ್ಲ ದೇವಾಲಯಗಳಲ್ಲಿ ಸಾಮಾನ್ಯವಾಗಿತ್ತು. ಗುರುವಾರ ಬೆಳಗ್ಗೆಯಿಂದಲೇ ಎಲ್ಲ ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಸಾರ್ವಜನಿಕರು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು.
ಜೋಕಾಲಿ ಆಕರ್ಷಣೆ: ಪಂಚಮಿ ಹಬ್ಬದ ಮತ್ತೊಂದು ಪ್ರಮುಖ ಆಕರ್ಷಣೆ ಜೋಕಾಲಿ, ನಗರ ಪ್ರದೇಶಗಳಲ್ಲಿ ತಮ್ಮ ಮನೆಯ ಮುಂದೆಯೇ ಜೋಕಾಲಿ ಕಟ್ಟಿ ಮಕ್ಕಳು ಆಟವಾಡಿದರೆ, ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಗಿಡಗಳಿಗೆ ಜೋಕಾಲಿ ಕಟ್ಟಿ, ಜೋರಾದ ಜೋಕಾಲಿ ಆಡುವುದು ವಿಶೇಷವಾಗಿತ್ತು. ಇನ್ನು ಪಂಚಮಿ ಅಂಗವಾಗಿ ಹಗ್ಗ ಜಗ್ಗಾಟ, ನಿಂಬೆ ಹಣ್ಣುಗಳ ಎಸೆತ, ಮಹಿಳೆಯರು ಬಾಜಿ ಕಟ್ಟಿ ಜೋಕಾಲಿ ಜೀಕುವುದು, ಪುರುಷರು ದೈಹಿಕ ಸಾಮರ್ಥ್ಯ ಪ್ರದರ್ಶಿಸುವ ಗ್ರಾಮೀಣ ಆಟಗಳನ್ನಾಡುವ ಮೂಲಕ ಪಂಚಮಿ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement