ಹಾಡುತ್ತ ನಾಗನಿಗೆ ಹಾಲೆರೆದ ಮಹಿಳೆಯರು
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ನಾಗರ ಪಂಚಮಿ ನಾಡಿಗೆ ದೊಡ್ಡದು ನಾಗಪ್ಪಗ ಹಾಲ ಹೊಯ್ಯಾಕೆ ಎಂದು ಹಾಡುತ್ತ ಕಲ್ಲಿನ ನಾಗಪ್ಪನಿಗೆ ಹಾಗೂ ಹಾವಿನ ಹುತ್ತಗಳಿಗೆ ಸುಮಂಗಲೆಯರು ಹಾಲನ್ನು ಎರೆದು ಪೂಜೆ ಸಲ್ಲಿಸಿ ಸಡಗರ ಸಂಭ್ರಮದಿಂದ ನಾಗರಪಂಚಮಿ ಬುಧವಾರ ಆಚರಿಸಿದರು.
ಶ್ರಾವಣ ಮಾಸದ ಅಮಾವಾಸ್ಯೆಯ ನಂತರ ಆರಂಭವಾಗುವ ಈ ಹಬ್ಬ ರೊಟ್ಟಿ ಪಂಚಮಿ ಸಡಗರದೊಂದಿಗೆ ನಾಲ್ಕುದಿನಗಳ ಕಾಲ ಈ ಹಬ್ಬಕ್ಕೆ ವಿಶೇಷ ಮೆರಗುಂಟು. ರೊಟ್ಟಿ ಪಂಚಮಿಗೆ ವಿಶೇಷವಾಗಿ ಎಳ್ಳು ಹಚ್ಚಿದ ಕಡಕ್ ರೊಟ್ಟಿಗಳು, ಶೇಂಗಾ ಚಟ್ನಿ, ಬದನೆಕಾಯಿ ಯಣಗಾಯಿ, ಉಸುಳಿಗಳು ವಿಶೇಷವಾಗಿ ಅಂದು ಮಾಡಲ್ಪಡುತ್ತದೆ. ರೊಟ್ಟಿ ಪಂಚಮಿಯ ಈ ಅಡುಗೆ, ಎಲ್ಲರ ಬಾಯಲ್ಲೂ ನೀರು ಬರಿಸುತ್ತದೆ.
ರೊಟ್ಟಿ ಪಂಚಮಿಯ ಮಾರನೆಯ ದಿನ ನಾರಿಯರೆಲ್ಲ ನಾಗದೇವತೆಯ ನೈವೇದ್ಯಕ್ಕಾಗಿ ಸಿದ್ಧಪಡಿಸಿದ ನಾನಾ ರೀತಿಯ ತಂಬಿಟ್ಟುಂಡಿ, ಗುಳಿಗೆ ಉಂಡಿ, ಎಳ್ಳು ಉಂಡಿ, ಶೇಂಗಾ ಉಂಡಿ ವಿಶೇಷವಾಗಿದ್ದು, ಕಲ್ಲನಾಗರನಿಗೆ ಹಾಲು ಎರೆದ ನಂತರ ಸಿದ್ಧಪಡಿಸಿದ ಈ ಉಂಡೆಗಳು ತಿನ್ನಲು ಮುಕ್ತವಾಗುತ್ತವೆ. ಮಧ್ಯಾಹ್ನದ ವೇಳೆಗೆ ನಾರಿಯರು ವಿಶೇಷವಾಗಿ ಜೋಕಾಲಿ ಆಡುವುದರ ಮೂಲಕ ಜೀವನದ ಜೋಕಾಲಿಯನ್ನು ನೆನಪಿಸಿಕೊಂಡು ಜೀಕುತ್ತಿರುವ ಸನ್ನಿವೇಶ ಎಲ್ಲೆಡೆ ಕಂಡುಬರುತ್ತದೆ. ಈ ಪಂಚಮಿ ಹಬ್ಬ ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ನಾಗರ ಪಂಚಮಿ ಹಬ್ಬದಲ್ಲಿ ಹೊಸದಾಗಿ ಮದುವೆಯಾಗಿ ಗಂಡನ ಮನೆ ಸೇರಿದ ಮಗಳನ್ನು ತವರಿಗೆ ಕರೆಸಿಕೊಳ್ಳುವುದು ರೂಢಿ. ಇದರಿಂದ ತವರಿನ ನೆನಪು ಸಂಬಂಧ ಗಟ್ಟಿಗೊಳ್ಳುವುದಲ್ಲದೆ, ಮಧುರ ಬಾಂಧವ್ಯ ಬೆಸೆಯುತ್ತದೆ ಎನ್ನುವ ನಂಬಿಕೆ. ಹೊಸದಾಗಿ ಮದುವೆಯಾದ ಹೆಂಗಳೆಯರು ತವರಿಗೆ ಬಂದಾಗ ಆ ಸಡಗರವೇ ಬೇರೆ. ಮದುವೆಯಾಗಿ ಹೋಗಿ ತವರಿಗೆ ಬಂದಿರುವ ಗೆಳತಿಯನ್ನು ಸಂಪರ್ಕಿಸಿ ತಮ್ಮ ಹೊಸ ಜೀವನದ ಸಿಹಿ-ಕಹಿ ಘಟನೆಗಳನ್ನು ಮೆಲಕು ಹಾಕಲು ನಾಗರ ಕಟ್ಟೆಗಳೆ ಇವರಿಗೆ ವೇದಿಕೆಗಳಾಗಿರುತ್ತವೆ.