ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆ
ಗದಗ: ಜಿಲ್ಲೆಯಲ್ಲಿ 2011ರ ಜನಸಂಖ್ಯೆ ಆಧಾರದಡಿ 22 ಹೊಸ ಗ್ರಾಮ ಪಂಚಾಯಿತಿಗಳ ರಚನೆ ಸೇರಿದಂತೆ ಒಟ್ಟಾರೆ 27 ಅರ್ಜಿ ಸ್ವೀಕರಿಸಲಾಗಿದೆ ಎಂದು ಗ್ರಾಪಂ ಪರಿಷ್ಕರಣೆ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಗ್ರಾಪಂ ಪುನರ್ ವಿಂಗಡಣೆ, ಪರಿಷ್ಕರಣೆ, ಕೇಂದ್ರ ಸ್ಥಾನ ಬದಲಾವಣೆಗಳ ಕುರಿತಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಧ್ಯಕ್ಷತೆಯ 6 ಜನರ ಸಮಿತಿ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡಿ, 2011ರ ಜನಸಂಖ್ಯೆ ಆಧಾರದಡಿ ಆಗಬೇಕಾದ ಗ್ರಾಪಂಗಳ ಪರಿಷ್ಕರಣೆ ಕುರಿತು ಅಹವಾಲುಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದರು.
ಇನ್ನುಳಿದ ಜಿಲ್ಲೆಗಳಿಗೆ ಸಮಿತಿ ಭೇಟಿ ನೀಡುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ, ಹೊಸ ಗ್ರಾಮ ಪಂಚಾಯಿತಿಗಳ ರಚನೆಗೆ ಶಿಫಾರಸುಗಳನ್ನು ಸಲ್ಲಿಸಲಾಗುವುದು. 1991ರಲ್ಲಿ ಜನಸಂಖ್ಯೆ ಆಧರಿಸಿರುವ ಪ್ರಸಕ್ತ ಗ್ರಾಪಂಗಳ ವ್ಯಾಪ್ತಿ ಬದಲಾಗಬೇಕಿದ್ದು, ಕೆಲವು ಜಿಲ್ಲೆ ಹೊರತುಪಡಿಸಿ ಉಳಿದೆಡೆ 5ರಿಂದ 6 ಸಾವಿರ ಜನಸಂಖ್ಯೆ, ಗರಿಷ್ಠ 6 ಕಿಮೀ ವ್ಯಾಪ್ತಿಯಲ್ಲಿ ಒಂದು ಗ್ರಾಪಂ ಹೊಂದಲು ಉದ್ದೇಶಿಸಲಾಗಿದೆ. ಇನ್ನೂ ಪ್ರಸ್ತಾವನೆ ಸಲ್ಲಿಸಬಯಸುವರು ಜುಲೈ 31ರೊಳಗೆ ಜಿಲ್ಲಾ ಪಂಚಾಯಿತಿಯಲ್ಲಿ ದೊರೆಯುವ ನಿಗದಿತ ನಮೂನೆಯಲ್ಲಿ ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಡಾ. ಅಂಬೇಡ್ಕರ್ ಬೀದಿ, ಬೆಂಗಳೂರು- 560001 ವಿಳಾಸಕ್ಕೆ ಸಲ್ಲಿಸಬೇಕೆಂದು ತಿಳಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ, ಗ್ರಾಪಂ ಪರಿಷ್ಕರಣೆ ಸಮಿತಿ ಸದಸ್ಯ ಬಿ.ಸಿ. ಶಿವಾನಂದ, ಎಸ್.ಬಿ. ದ್ಯಾಬೇರಿ, ಎಸ್.ಕೆ. ಭಾಗವತ್, ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರಿನ ಸದಸ್ಯ ಕಾರ್ಯದರ್ಶಿ ಮತ್ತು ನಿರ್ದೇಶಕಿ ಎ.ಆರ್. ಸುಧಾಮಣಿ ಇತರರಿದ್ದರು.