ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೃತ್ತರೂ ಆಶ್ರಯ ಮನೆ ಫಲಾನುಭವಿ

Mainashree
Updated On : 3 Jun 2014, 11:00 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 2
ನಿವೃತ್ತ ನೌಕರರು, ಶ್ರೀಮಂತರು, ಬಡತನ ರೇಖೆಗಿಂತ ಮೇಲುಸ್ತರದಲ್ಲಿರುವವರು ಸೇರಿ ಗಣ್ಯ ವ್ಯಕ್ತಿಗಳು ಶಿರಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಆಶ್ರಯ ನಿವೇಶನದ ಫಲಾನುಭವಿಗಳಾಗಿದ್ದು, ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಹಣದ ಆಮಿಷಕ್ಕೆ ಬಲಿಯಾಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಗೆ ಪಪಂ ಸದಸ್ಯ ಸಿ.ಕೆ. ಮುಳಗುಂದ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಪಂನಲ್ಲಿ ನಡೆದಿರುವ ಅಪಾರ ಪ್ರಮಾಣದ ಭ್ರಷ್ಟಾಚಾರದ ತನಿಖೆ ಹಾಗೂ ಆಶ್ರಯ ನಿವೇಶನದ ಅರ್ಹ ಫಲಾನುಭವಿಗಳಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ, ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ಸಮಗ್ರ ದಾಖಲೆ ಸಮೇತ ಮೇ 31ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ಈ ಕುರಿತು ಸಿ.ಕೆ. ಮುಳಗುಂದ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಮೇಲಧಿಕಾರಿಗಳು ತನಿಖೆಗೆ ವಿಳಂಬ ನೀತಿ ಅನುಸರಿಸಿದಲ್ಲಿ ಪಪಂ ಕಾರ್ಯಾಲಯದೆದುರು ಉಪವಾಸ ಸತ್ಯಾಗ್ರಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
2006ರಿಂದ ಇಲ್ಲಿವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಆಶ್ರಯ ಫಲಾನುಭವಿಗಳ ಹೆಸರಿನಲ್ಲಿ ಪಪಂನಲ್ಲಿ ಸುಮಾರು ರು. 9 ಕೋಟಿ ಅವ್ಯವಹಾರ ನಡೆದಿದೆ. ಸರ್ಕಾರದ ಯಾವುದೇ ಮಾನದಂಡ ಪರಿಗಣಿಸದೇ ಹಣ ನೀಡಿದ, ಕೊಟ್ಟಿ ದಾಖಲೆ ಪೂರೈಸಿದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಒಂದೇ ಕುಟುಂಬದ 4-5 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ನೀತಿಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಾಜಪೇಯಿ ವಸತಿ, ನಮ್ಮ ಮನೆ, ರಾಜೀವ ಗಾಂಧಿ ವಸತಿ ಯೋಜನೆ ಫಲಾನುಭವಿಗಳನ್ನು ಆಶ್ರಯ ಯೋಜನೆ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಿದ್ದು, ಚೆಕ್ ವಿತರಿಸುವ ವೇಳೆ ಆಯ್ಕೆಯಾದ ಅನೇಕ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿ ಹಣ ನೀಡದೆ, ನಿವೇಶನವಿಲ್ಲದೆ ಇರುವ ಖೊಟ್ಟಿ ದಾಖಲೆ ನೀಡಿದ ಫಲಾನುಭವಿಗಳಿಗೆ ಚೆಕ್ ನೀಡಿದ್ದಾರೆ. ಇದರಲ್ಲಿ ನಿವೃತ್ತ ನೌಕರರು ಸೇರಿದ್ದು, ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಅರ್ಹರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement