ಸೌಲಭ್ಯ: ರಸ್ತೆಗೆ ಮುಳ್ಳು ಇಟ್ಟು ಪ್ರತಿಭಟನೆ
ನರಗುಂದ: ತಾಲೂಕಿನ ಬನಹಟ್ಟಿ ಗ್ರಾಮದ ಅಂಬೇಡ್ಕರ್ ನಗರದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ಹೊನ್ನಮ್ಮದೇವಿ, ಬಸವೇಶ್ವರ ದೇವಸ್ಥಾನಕ್ಕೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಇಲ್ಲಿನ ಮೂಲ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳು ಮೂಗನೂರಿಗೆ ಹೋಗುವ ರಸ್ತೆಗೆ ಜಾಲಿಕಂಟಿ (ಮುಳ್ಳು) ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಹಲವು ದಿನಗಳಿಂದ ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಾಸಿಸುವ ನಿವಾಸಿಗಳಿಗೆ ಸೂಕ್ತ ರಸ್ತೆ, ಶೌಚಾಲಯ, ಚರಂಡಿ, ಕುಡಿಯುವ ನೀರು, ಸರ್ಕಾರಿ ರಸ್ತೆ ಒತ್ತುವರಿ ವಿವಿಧ ಮೂಲ ಸಮಸ್ಯೆಗಳ ಕುರಿತು ವರ್ಷದ ಹಿಂದೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮೇಲಾಗಿ ಈ ನಗರದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಬನಹಟ್ಟಿ, ಮೂಗನೂರು, ಕುರ್ಲಗೇರಿ, ಅಮರಗೋಳ ವಿವಿಧ ಗ್ರಾಮಸ್ಥರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಇಲ್ಲಿಗೆ ಕರೆದುಕೊಂಡು ಬರಲು ಸರಿಯಾದ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಇದ್ದ ಅಲ್ಪ ರಸ್ತೆಯಲ್ಲಿಯೇ ಜಾಲಿಕಂಟಿ ತುಂಬಿದ್ದು, ಈ ಕುರಿತು ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ತಿಳಿಸಿದರೂ ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಎಸ್.ಆರ್. ಪಾಟೀಲ ಮಾತನಾಡಿ, ಈ ರೀತಿ ರಸ್ತೆ ಬಂದ್ ಮಾಡಬಾರದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ವಿಷಯ ಕುರಿತು ನಿಮ್ಮ ಗ್ರಾಪಂಗೆ ಅರ್ಜಿ ಸಲ್ಲಿಸಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿಭಟನಾಕಾರರು, ಈ ಕುರಿತು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರಾಪಂ ಅಧಿಕಾರಿ ಮಾತನಾಡಿ, 5 ದಿನಗಳಲ್ಲಿ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರೆ. ಅಷ್ಟರಲ್ಲಿ ನಾವು ಇಲ್ಲಿನ ಮೂಲ ಸಮಸ್ಯೆಗಳನ್ನು ಈಡೇರಿಸಿ ಕೊಡುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ರಮೇಶ ಚಲವಾದಿ, ಕುಮಾರ ಚಲವಾದಿ, ಯಲ್ಲಪ್ಪ ಚಲವಾದಿ, ಮುದಕಪ್ಪ ಚಲವಾದಿ, ಈರಪ್ಪ ಚಲವಾದಿ, ಮಲ್ಲಪ್ಪ ಚಲವಾದಿ, ಮಂಜುನಾಥ ಚಲವಾದಿ, ಸಂತೋಷ ಚಲವಾದಿ, ಲಕ್ಷ್ಮಣ ಚಲವಾದಿ, ಶಿವಾನಂದ ಚಲವಾದಿ, ನಟರಾಜ ಚಲವಾದಿ, ಶರಣಪ್ಪ ಚಲವಾದಿ ಇದ್ದರು.