ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಕ್ಷೇತರನಾಗಿ ಸ್ಪರ್ಧೆ: ಅಂಗಡಿ

Mainashree
Updated On : 4 Jun 2014, 10:36 am

ಕನ್ನಡಪ್ರಭ ವಾರ್ತೆ, ಗದಗ, ಜೂ. 3
ಜೂನ್ 20ರಂದು ಜರುಗಲಿರುವ ಪಶ್ಚಿಮ ಪದವೀಧರ ಮತಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಡಾ. ಲಿಂಗರಾಜ ಅಂಗಡಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 20 ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ನಾನು ಕವಿವಿ ಸಿನೇಟ್, ಸಿಂಡಿಕೇಟ್, ವಿದ್ಯಾಪರಿಷತ್ ಸದಸ್ಯನಾಗಿ, ಕಾಲೇಜು ಪ್ರಾಧ್ಯಾಪಕರ ಸಂಘಟನೆಯ ಮುಖಂಡನಾಗಿ ಶಿಕ್ಷಕರ, ಪದವೀಧರರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಹತ್ತು ಹಲವಾರು ಹೋರಾಟಗಳನ್ನು ಮಾಡಿದ್ದೇನೆ. ಧಾರವಾಡ ಜಿಲ್ಲಾ ಕಸಾಪದ ಅಧ್ಯಕ್ಷನಾಗಿ ಸಾಂಸ್ಕೃತಿಕ, ಸಾಹಿತ್ಯಿಕ ಸೇವೆಯನ್ನೂ ಮಾಡುತ್ತಾ ಬಂದಿದ್ದು, ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದೇನೆ. ಪ್ರಜ್ಞಾವಂತ ಪದವೀಧರ ಮತದಾರರು 4 ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಆಯ್ಕೆಯಾಗುವ ವಿಶ್ವಾಸವಿದೆ.
ಗುತ್ತಿಗೆ ನೌಕರರು, ಅಥಿತಿ ಉಪನ್ಯಾಸಕರು, ಗೌರವಧನ ಹೆಸರಿನಲ್ಲಿ ಯುವ ಪದವೀಧರ ಉದ್ಯೋಗಿಗಳ ಮೇಲೆ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಶೋಷಣೆ ನಡೆಯುತ್ತಿದೆ. ಅವರು ಅಭದ್ರತೆಯ ಭಯದಲ್ಲಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸುತ್ತ ಬಂದಿದ್ದು, ಸರ್ಕಾರ ಖಾಲಿ ಹುದ್ದೆಗಳನ್ನು ಭ್ರಷ್ಟಾಚಾರ ರಹಿತ ನೇಮಕಾತಿ ಮಾಡುವಂತೆ ಪ್ರಯತ್ನ ಮಾಡುತ್ತೇನೆ. ನಿರುದ್ಯೋಗ ಪ್ರಶ್ನೆ, ಶಿಕ್ಷಕರ, ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಪ್ರಜ್ಞಾವಂತ ಮತದಾರರಿರುವ ಈ ಕ್ಷೇತ್ರದ ಚುನಾವಣೆಯಲ್ಲಿ ಹಣಬಲ, ಆತಂಕಕಾರಿಯಾದ ಅನೈತಿಕ ಒಳ ರಾಜಕೀಯ ಹಾಗೂ ಕುಟುಂಬ ರಾಜಕೀಯ ಮಾಡಲಾಗುತ್ತಿದೆ. ಬಿಜೆಪಿಯ ಮೋದಿ ಅಲೆ, ಮಾಜಿ ಸಚಿವ ಬಸವರಾಜ ಹೊರಟ್ಟಿಯವರ ಪ್ರಭಾವ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುಲ್ಲ. ಮತದಾರರರು ನನಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗಜೇಂದ್ರಗಡ ಪುರಸಭೆ ಸದಸ್ಯ ಎಂ.ಎಸ್. ಹಡಪದ, ಮಹೇಶ ಪತ್ತಾರ, ಪ್ರೊ. ಕೆ.ಎಸ್. ಕೌಜಲಗಿ, ವಸಂತ ಮುರಗೋಡ, ಎಸ್.ಆರ್. ಆಶಿ, ಡಿವೈಎಫ್‌ಐ ಮುಖಂಡ ಮಹಾಗುಂಡಪ್ಪ ಅಂಗಡಿ, ಕಳಸಾ ಬಂಡೂರಿ ಹೋರಾಟ ಸಮಿತಿ ಸಂಚಾಲಕ ವಿಕಾಸ ಸೊಪ್ಪಿನ, ಜಗದೀಶ ಕುರ್ಲಗೇರಿ, ಶರಣು ಶಿರೋಳ, ಸಿದ್ದನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement