ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರಾಚ್ಯಶಾಸನ ರಕ್ಷಣೆ ನೀತಿ ರಚಿಸಿ

Mainashree
Updated On : 4 Jun 2014, 10:36 am

ಕನ್ನಡಪ್ರಭ ವಾರ್ತೆ, ಗದಗ, ಜೂ. 3
ಇತಿಹಾಸ ಪ್ರಜ್ಞೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಗತ ಇತಿಹಾಸ ಹೊಂದಿದ ಅನೇಕ ಪ್ರಾಚ್ಯ ಶಿಲಾಶಾಸನಗಳು ಅವಸಾನದ ಅಂಚಿನಲ್ಲಿದ್ದು, ಅವುಗಳ ಸಂರಕ್ಷಣೆಗಾಗಿ ಪ್ರಾಚ್ಯ ಶಿಲಾಶಾಸನ ಸಂರಕ್ಷಣಾ ನೀತಿ ಜಾರಿಗೊಳಿಸಬೇಕಾಗಿದೆ ಎಂದು ಇತಿಹಾಸ ಪುನರುತ್ಥಾನ ಸಮಿತಿ (ರಾಜ್ಯ ಘಟಕ)ಯ ಮುಖ್ಯಸ್ಥ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು.
ಈಚೆಗೆ ಜಿಲ್ಲೆಯ ರೋಣ ತಾಲೂಕಾದ್ಯಂತ ನಡೆಯುತ್ತಿರುವ ಪ್ರಾಚ್ಯ ಜಾಗೃತಿ ಅಭಿಯಾನದಲ್ಲಿ ರೋಣ ತಾಲೂಕಿನ ಮೆಣಸಗಿ, ಅಬ್ಬಿಗೇರಿ, ಹಿರೇಹಾಳ, ಸೂಡಿ ಸಮೀಪದ ಬೇಲೂರು ಗ್ರಾಮಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಶಿಲಾಶಾಸನಗಳ ಬಗ್ಗೆ ಮಾಹಿತಿ ಕಲೆ ಹಾಕುವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ಸವ ಸಮ್ಮೇಳನ ನೆಪದಲ್ಲಿ ಪೋಲಾಗುತ್ತಿರುವ ಹಣವನ್ನು ಸರ್ಕಾರ ಇತಿಹಾಸ ಹೊಂದಿದ ದೇವಾಲಯ ಹಾಗೂ ಶಿಲ್ಪಕಲಾ ಶಿಲಾಶಾಸನಗಳ ಜೀರ್ಣೋದ್ಧಾರಕ್ಕೆ ಬಳಸಬೇಕಾಗಿದೆ. ಅಲ್ಲದೇ ರಾಜ್ಯದ ಪ್ರತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿರುವ ಶಾಸನಗಳ ಸಂರಕ್ಷಣೆಗಾಗಿ ಪ್ರಾಚ್ಯ ಶಿಲಾಶಾಸನ ಸಂರಕ್ಷಣಾ ನೀತಿ ಜಾರಿಗೆ ತರುವುದರ ಮೂಲಕ ಶಿಲ್ಪಕಲೆಗೆ ಸಂಬಂಧಪಟ್ಟಂತೆ ಯಾವುದೇ ಸಂಪತ್ತಾಗಲಿ ಆ ಗ್ರಾಮದ ಸಂಪತ್ತು ಎಂದು ಘೋಷಣೆ ಮಾಡಬೇಕು ಎಂದರು.
ಇತಿಹಾಸ ಪುನರುತ್ಥಾನ ಸಮಿತಿಯ ರೋಣ ತಾಲೂಕು ಅಧ್ಯಕ್ಷ ಸಂಗಯ್ಯ ಗಂಗಾಧರಮಠ ಮಾತನಾಡಿ, ದ್ರೋಣಪುರವೆಂದು ಖ್ಯಾತಿ ಗಳಿಸಿದ ರೋಣ ತಾಲೂಕಿನ ಮೆಣಸಗಿಯ ಕಲ್ಮೇಶ್ವರ ದೇವಾಲಯ, ನಿಡಗುಂದಿಯ ನಾರಾಯಣ ದೇವಾಲಯ, ಅಬ್ಬಿಗೇರಿ ಜ್ಯೋತಿರ್ಲಿಂಗ ಗುಡಿ, ಕೋಡಿಕೊಪ್ಪದ ಕಲ್ಮೇಶ್ವರ ಗುಡಿ, ಜಕ್ಕಲಿಯ ಬ್ರಹ್ಮ ದೇವಸ್ಥಾನ, ಹಿರೇಹಾಳದ ರಾಮೇಶ್ವರ ದೇವಸ್ಥಾನ, ಯಾವಗಲ್ಲನ ಹೇಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಐತಿಹಾಸಿಕ ದೇವಾಲಯಗಳಿದ್ದು, ಅವುಗಳ ಕಾಯಕಲ್ಪಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಬೇಕಾಗಿದೆ. ರೋಣ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಇತಿಹಾಸ ಹೇಳುವ ಶಾಸನಗಳ ಕಲ್ಲುಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.
ಕಾಶಿ ವಿದ್ಯಾಪೀಠದ ಶಿಬಿರಾರ್ಥಿ ಶ್ರೀಧರ ಹಿರೇಮಠ, ಶಿವರಾಜ ಯಮನೂರ ಪ್ರಾಸ್ತಾವಿಕ ಮಾತನಾಡಿದರು. ಅಭಿಯಾನದ ಶಿಬಿರಾರ್ಥಿ ಸುಜಾತಾ, ಪಂಚಾಕ್ಷರಯ್ಯ, ಅಯ್ಯಮ್ಮ, ಬಸಯ್ಯ, ಹನುಮಂತ ಪೂಜಾರ, ಅಂದಾನಯ್ಯ, ದೇವರಾಜ ಸಾಲಿಮಠ, ರೇಖಾ ಬಂಡಿವಡ್ಡರ, ಪ್ರಭು ಕಿನ್ನಾಳ, ಕವಿತಾ ಜಾಲಿಹಾಳ, ಶೇಖರ್ ಸಜ್ಜನರ, ವಿನಾಯಕ ಚೌಡಾಪುರ ಮುಂತಾದವರು ಉಪಸ್ಥಿತರಿದ್ದರು. ಮರಿಯಪ್ಪ ಗೌಡರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement