ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಗಾರು ಬಿತ್ತನೆಗೆ ತೇವಾಂಶ ಕೊರತೆ

Mainashree
Updated On : 4 Jun 2014, 10:37 am

ಕನ್ನಡಪ್ರಭ ವಾರ್ತೆ, ರೋಣ, ಜೂ. 3
ಈಚೆಗೆ ಅಲ್ಪ ಪ್ರಮಾಣದಲ್ಲಿ ಸುರಿದ ರೋಹಿಣಿ ಮಳೆಯಿಂದಾಗಿ ತಾಲೂಕಿನ ಕೆಲ ಭಾಗಗಳಲ್ಲಿ ರೈತರು ತೇವಾಂಶ ಕೊರತೆ ಮಧ್ಯೆಯೂ ಮುಂಗಾರು ಹಂಗಾಮಿನ ಹೆಸರು, ಸಜ್ಜೆ, ಶೆಂಗಾ, ತೊಗರಿ, ಗೋವಿನಜೋಳ, ಬಿಟಿ ಹತ್ತಿ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಸತತ 3 ವರ್ಷ ಮಳೆ ಕೊರತೆಯಿಂದ ಬರಗಾಲ ಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿದ ರೋಣ ತಾಲೂಕಿನ ರೈತ ಸಮುದಾಯಕ್ಕೆ ಸದಾ ಮಳೆಯದ್ದೆ ಚಿಂತೆ ಕಾಡುತ್ತಿದ್ದು, ತಾಲೂಕಿನ ಕೆಲ ಭಾಗದಲ್ಲಿ ಮಳೆಯಾಗಿದ್ದು, ಕೆಲವೆಡೆ ಸಂಪೂರ್ಣವಾಗಿಲ್ಲ. ಈ ಬಾರಿಯಾದರೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬರುವ ಆಶಾಭಾವನೆಯೊಂದಿಗೆ ಈಗಾಗಲೇ ಹೊಲಗಳನ್ನು ನೆಗಿಲು, ರಂಟೆ-ಕುಂಟೆ ಒಡೆದು, ಕಸ ತೆಗೆದು ಹಸನಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಬಿತ್ತನೆ ಗುರಿ: ತಾಲೂಕಿನಲ್ಲಿ ಒಟ್ಟು 1,29,091 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಅದರಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಒಟ್ಟು 1,02.588 ಹೆಕ್ಟೇರ್ ಸಾಗುವಳಿ ಕ್ಷೇತ್ರವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 68,250 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಏಕದಳ ಧಾನ್ಯಗಳಾದ ಮೆಕ್ಕೆಜೋಳ, ಹೈಬ್ರೀಡ್ ಜೋಳ ಮತ್ತು ಸಜ್ಜಿ ಬೆಳೆಗಳನ್ನು 16,700 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯವಾದ ತೊಗರಿ, ಹೆಸರು, ಉದ್ದು, ಅಲಸಂದಿ, ಅವರಿ ಬೆಳೆಗಳನ್ನು 33.300 ಹೆಕ್ಟೇರ್‌ನಲ್ಲಿ, ಎಣ್ಣೆಕಾಳು ಬೆಳೆಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರಳ್ಳು, 17,500 ಹೆಕ್ಟೇರ್‌ನಲ್ಲಿ, ಸಂಕರಣ ಹತ್ತಿ(ಬಿಟಿ) 550 ಹೆಕ್ಟೇರ್‌ನಲ್ಲಿ, ಕಬ್ಬು 100 ಹೆಕ್ಟೇರ್‌ನಲ್ಲಿ ಮತ್ತು ಬತ್ತ 150 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ಶೇ. 6.5ರಷ್ಟು ಬಿತ್ತನೆಯಾಗಿದೆ.
ಮಳೆ ಪ್ರಮಾಣ: ವಾಡಿಕೆಯಂತೆ ವರ್ಷಕ್ಕೆ 692.00 ಮಿ.ಮೀ ಮಳೆಯಾಗಬೇಕಿತ್ತು. ಜನವರಿಯಿಂದ ಮೇ 31 ಅಂತ್ಯದೊಳಗೆ ಸುಮಾರು 104 ಮಿ.ಮೀನಷ್ಟು ಮಳೆಯಾಗಬೇಕಿದ್ದು, ಅದರಲ್ಲಿ ಕೆಲ ಭಾಗದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಈಗಾಗಲೇ ಸುರಿದ ಅಲ್ಪ ಮಳೆಯಿಂದ ತಾಲೂಕಿನ ಮುಗಳಿ, ಹಿರೇಹಾಳ, ತಳ್ಳಿಹಾಳ, ಹೊನ್ನಿಗನೂರು, ಸೂಡಿ, ಹೊಸಳ್ಳಿ, ಜಿಗಳೂರು, ಮೇಲ್ಮಠ, ಅರಹುಣಸಿ, ಹುಲ್ಲೂರು, ಹಿರೇಮಣ್ಣೂರು, ಸಂದಿಗವಾಡ, ಮಲ್ಲಾಪುರ, ಸವಡಿ ಸೇರಿದಂತೆ ಕೆಲ ಭಾಗಗಳಲ್ಲಿ ಮಾತ್ರ ರೈತರು ಒಣ ಭೂಮಿಯಲ್ಲಿಯೇ ಹೆಸರು ಬಿತ್ತನೆ ಮಾಡುತ್ತಿದ್ದಾರೆ. ಅಬ್ಬಿಗೇರಿ, ಕುರಡಗಿ, ಡ.ಸ. ಹಡಗಲಿ, ಜಕ್ಕಲಿ, ನಿಡಗುಂದಿ, ಮಾರನಬಸರಿ, ಹಾಲಕೇರಿ, ಗೋಗೇರಿ, ಕುಂಟೋಜಿ ಸುತ್ತಲಿನ ಭಾಗಗಳಲ್ಲಿ ತೇವಾಂಶ ಕೊರತೆಯಿಂದ ಇನ್ನೂ ಬಿತ್ತನೆ ಪ್ರಾರಂಭಿಸಿಲ್ಲ. ಆದರೆ, ಒಣ ಬೇಸಾಯವನ್ನೇ ನಂಬಿಕೊಂಡು ಬದುಕುವ ರೈತರ ಕೈ ಹಿಡಿಯುವುದೇ ಮುಂಗಾರು ಎಂಬ ದಟ್ಟವಾದ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಗೊಬ್ಬರ ದಾಸ್ತಾನು: ತಾಲೂಕಿನಲ್ಲಿ ರಾಜ್ಯ ಬೀಜ ನಿಗಮ ಸೇರಿದಂತೆ ರೋಣ, ನರೇಗಲ್ ಮತ್ತು ಹೊಳೆ ಆಲೂರಿನ 3 ಕಡೆ ರೈತ ಸಂಪರ್ಕ ಕೇಂದ್ರವಿದ್ದು, ಬೆಳವಣಕಿ, ಹಿರೇಹಾಳ ಮತ್ತು ಗಜೇಂದ್ರಗಡ ಹೀಗೆ 3 ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 1245 ಕ್ವಿಂಟಲ್ ಮುಂಗಾರು ಹಂಗಾಮಿನ ಎಲ್ಲ ಬೀಜಗಳನ್ನು ದಾಸ್ತಾನಿವೆ. 200 ಕ್ವಿಂಟಲ್ ಹೆಸರು, 2400 ಕ್ವಿಂಟಲ್ ಮೆಕ್ಕೆಜೋಳ, 50 ಕ್ವಿಂಟಲ್ ಶೇಂಗಾ, 11 ಕ್ವಿಂಟಲ್ ಹೈಬ್ರೀಡ್ ಜೋಳ, 30 ಕ್ವಿಂಟಲ್ ಸೂರ್ಯಕಾಂತಿ ಸಂಗ್ರಹವಿದೆ. ಅಲ್ಲದೇ ಜಿಂಕ್, ಜಿಪ್ಸ್‌ಂ, ಬೋರಾನ್ ಔಷಧಿ ಹಾಗೂ ಸಾವಯವ ಗೊಬ್ಬರಗಳಾದ ಪಿಎಸ್‌ಬಿ (ರಂಜಕ ಕರಗಿಸುವ ಅನುಜೀವಿ), ರೈಜೋಬಿಎಂ, ಸಿಟಿಕಾಂಪೋಸ್ಟ್, ವರುಮಿ ಕಾಂಪೋಸ್ಟ್, ಅಗ್ರಿಗೋಲ್ಡ್ ಗೊಬ್ಬರಗಳು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯ್ತಿ ದರದಲ್ಲಿ ಇದೆ.

ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement