ರೈತರಿಂದ ಮುಂಗಾರು ಬಿತ್ತನೆ
ನರಗುಂದ: ಪ್ರಸಕ್ತ ಮುಂಗಾರು ಮಳೆ ತಾಲೂಕಿನಲ್ಲಿ ಉತ್ತಮವಾಗಿ ಆಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಬಿತ್ತನೆಯಲ್ಲಿ ತೊಡಗಿದ್ದಾರೆ. ಹಿಂದಿನ ವರ್ಷದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗದಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಆದರೆ, ಈ ಬಾರಿ ಉತ್ತಮವಾಗಿ ಸುರಿದಿರುವುದರಿಂದ ರೈತರ ಮೊಗದಲ್ಲಿ ಕಳೆ ಬಂದಿದೆ.
ಮುಂಗಾರು ಬೆಳೆಗಳಾದ ಹೆಸರು, ಉಳ್ಳಾಗಡ್ಡಿ, ಮೆಣಸು, ಹೈಬ್ರೀಡ್ ಜೋಳ, ಬಿಟಿ ಹತ್ತಿ ಸೇರಿ ಇತರೆ ಬೆಳೆಗಳನ್ನು ಬಿತ್ತನೆಯನ್ನು ರೈತರು ಮಾಡುತ್ತಿದ್ದು, ಮತ್ತೊಂದು ಕಡೆ ಮಳೆ ಹೆಚ್ಚಾಗಿದ್ದರಿಂದ ರೈತರು ಜಮೀನುಗಳನ್ನು ಉಳುಮೆ ಮಾಡಲು ಅವಕಾಶವೇ ಇಲ್ಲದಂತಾಗಿ ರೈತರ ಜಮೀನುಗಳಲ್ಲಿ ಕಸ ಬೀಳುವಂತಾಗಿದೆ. ತಾಲೂಕಿನಲ್ಲಿ ಮಲಪ್ರಭಾ ಜಲಾಶಯದ ಕಾಲುವೆಗಳು ಇರುವುದರಿಂದ ಬಹುತೇಕ ಜಮೀನುಗಳು ನೀರಾವರಿ ಸೌಲಭ್ಯ ಹೊಂದಿವೆ. ಉಳಿದ ಒಣ ಬೇಸಾಯ ಪದ್ಧತಿಯಲ್ಲಿ 12711 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಗಾಲೇ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹೆಸರಿನ ಪ್ರಮಾಣವೇ ಹೆಚ್ಚಾಗಿದೆ. ಆದರೆ, ಬದಲಾಗುತ್ತಿರುವ ರೈತರ ಅಭಿರುಚಿಯಿಂದ ಜಾನುವಾರುಗಳು ಮಾಯವಾಗುತ್ತಿದ್ದು, ಎಲ್ಲ ಹೊಲಗಳಲ್ಲಿಯೂ ಬಿತ್ತನೆ ವೇಳೆಯಲ್ಲಿಯೂ ಟ್ರ್ಯಾಕ್ಟರ್‌ಗಳೇ ಸದ್ದು ಮಾಡುತ್ತಿವೆ.