ಗಿಡ-ಮರಗಳ ನಾಶಕ್ಕೆರಾಜಕಾರಣಿಗಳೇ ಕಾರಣ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 5
ಈ ರಾಜಕಾರಣಿಗಳು ದೊಡ್ಡ ದೊಡ್ಡ ಕಾರ್ಯಕ್ರಮದಾಗ ಎಲ್ಲರ್ರೂ ನಿಮ್ ನಿಮ್ ಮನಿಮುಂದ ತಪ್ಪದ ಗಿಡಾ ಹಚ್ಚರೀ ಅಂತ ಹೇಳತಾರ, ನಂತರ ತಾವ ರೋಡ ಮಾಡಸಾಕೋ, ನೀರಿನ ಪೈಪ್ ಹಾಕಾಕೋ ಎಲ್ಲ ಗಿಡಗಳನ್ನ ಕಡಸ್ತಾರ. ನಮ್ಮ ಗಿಡಾಮರಾ ಎಲ್ಲ ಹಾಳಾಗಾಕ ಈ ರಾಜಕಾರಣಿಗಳ ಕಾರಣ ಎಂದು ಪ್ರೌಢಶಾಲೆ ವಿದ್ಯಾರ್ಥಿನಿ ಕವಿತಾ ಜೋಳದ ಮನಸ್ಸಿನಲ್ಲಿರುವ ಆಕ್ರೋಶವನ್ನು ಹೊರ ಹಾಕಿದಳು.
ಗುರುವಾರ ಮುಂಡರಗಿ ಪಟ್ಟಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಹೌದ್ರಿ... ಸಾಹೇಬ್ರ ನಮ್ಮ ಗದಗ ರೋಡಿನ್ಯಾಗ 100 ವರ್ಷದ ಹಿಂದಿನ ಗಿಡಾ ಇದ್ದವ್ರಿ. ಈಗ ರಸ್ತೆ ಅಗಲ ಮಾಡೂ ನೆಪದಾಗ ಎಲ್ಲಾ ಗಿಡಾ ಕಡಿಯಾಕ ಈಗಿರುವ ಜನಪ್ರತಿಧಿಗಳ ಮುಂದಾಗಿ ಕಡದಾರ. ಹಿಂಗಾದರ ಪರಿಸರ ಹ್ಯಾಂಗ್ ಉಳಿತೈತ್ರಿ ಎಂದು ವೇದಿಕೆ ಮೇಲಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ ಇತರೆ ಜನಪ್ರತಿನಿಧಿಗಳನ್ನು ಪ್ರಶ್ನಿಸಿದಳು.
ನಾವು ನಮ್ಮ ಮನೆಗಳ ಸುತ್ತ ಬರೀ ಹೂವಿನ ಗಿಡಗಳನ್ನು ಹಚ್ಚಲು ಮಾತ್ರ ಮುಂದಾಗುತ್ತೇವೆ. ಆದರೆ, ನಾವೆಲ್ಲರೂ ವಿಚಾರ ಮಾಡಿ ಪರಿಸರಕ್ಕೆ ಪೂರಕವಾಗುವ ಬೇವು, ಬನ್ನಿ, ಆಲದ ಮರಗಳನ್ನು ಬೆಳೆಯುವುದು ಅವಶ್ಯವಾಗಿದೆ ಎಂದರು.
ವಿದ್ಯಾರ್ಥಿ ಸಿದ್ದು ರಾಜೂರು ಮಾತನಾಡಿ, ಸರ್ಕಾರದವರು ಗಿಡಾ ಇದ್ದಲ್ಲಿಯೇ ರಸ್ತೆ, ಪೈಪು ಹಾಕಲು ಮುಂದಾಗುತ್ತಾರೆ. ಏಕೆ ಖಾಲಿ ಜಾಗ ಇರುವಲ್ಲಿ ಅವರೆಂದು ಕಾಮಗಾರಿ ಮಾಡಿದ ಉದಾಹರಣೆಗಳಿಲ್ಲ. ಗಿಡ ಕಡಿಯುವಾಗ ಮರಳಿ ಗಿಡ ಇದ್ದ ಆ ಜಾಗೆಯಲ್ಲಿ ಮತ್ತೆ ಗಿಡ ಹಚ್ಚುವುದಾಗಿ ಹೇಳತಾರ ಆದರ ಎಲ್ಲಿಯೂ ಒಂದೇ ಒಂದು ಗಿಡ ಹಚ್ಚಿಲ್ಲ. ಇದು ಯಾವ ಪರಿಸರ ಪ್ರೀತಿ ಎಂದು ಪ್ರಶ್ನಿಸಿದ. ಶೃತಿ ಘಟ್ಟಿರಡ್ಡಿಹಾಳ ಕೂಡಾ ಈ ಇಬ್ಬರೂ ವಿದ್ಯಾರ್ಥಿಗಳ ಮಾತಿಗೆ ಪೂರಕವಾಗಿಯೇ ಮಾತನಾಡಿದಳು.
ವಿದ್ಯಾರ್ಥಿಗಳ ಮಾತಿಗೆ ಸ್ಪಂದಿಸಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ನಮ್ಮ ನಾಡಿನ ಮುಂದಿನ ಭರವಸೆಯೆಂದರೆ ಮಕ್ಕಳೇ. ಇಂದು ಮಕ್ಕಳೇ ಖುದ್ದಾಗಿ ಪರಿಸರ ಕುರಿತು ಇಷ್ಟೊಂದು ತಾಳಜಿ ವಹಿಸಿ ಮಾತನಾಡುತ್ತಿರುವುದು ನನಗೆ ಖುಷಿ ತಂದಿದೆ. ನಿಜವಾಗಿಯೂ ಅವರು ಹೇಳುವ ಮಾತಿನಲ್ಲಿ ಸತ್ಯವಿದೆ. ಆದರೆ, ಇಂದಿನ ಜನಸಂಖ್ಯೆಗನುಗುಣವಾಗಿ ರಸ್ತೆ, ಚರಂಡಿ ಕಲ್ಲು ನಿರ್ಮಾಣ ಮಾಡುವುದೂ ಅವಶ್ಯವಾಗಿದೆ. ಆದರೂ ಪರಿಸರಕ್ಕೆ ಧಕ್ಕೆ ಬರದಂತೆ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದರು.