ಅವ್ಯವಹಾರ: ತನಿಖೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಗದಗ, ಜೂ. 7
ತಾಲೂಕಿನ ಸೊರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಅವ್ಯವಹಾರ ಕುರಿತು ಸೂಕ್ತ ತನಿಖೆಗೆ ಒತ್ತಾಯಿಸಿ ಶನಿವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕರ್ನಾಟಕ ಜನಹಿತ ವೇದಿಕೆ ಗದಗ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಜನಹಿತ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಸ್. ಸೋಂಪುರ ಮಾತನಾಡಿ, ತಾಲೂಕಿನ ಸೊರಟೂರು ಗ್ರಾಪಂ ವ್ಯಾಪ್ತಿಯಲ್ಲಿ ಖಾತ್ರಿ ಯೋಜನೆಯಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿರುವ ಮೈಲಾರಲಿಂಗೇಶ್ವರ ಗುಡಿಯ ಸ್ಲ್ಯಾಬಿಗಾಗಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯು ಕೇವಲ ಕಾಗದ ಪತ್ರದಲ್ಲಿ ಪೂರ್ಣಗೊಂಡಿದ್ದು, ಕಾರ್ಯ ರೂಪದಲ್ಲಿ ಕಾಮಗಾರಿ ನಡೆದಿಲ್ಲ.
ಗ್ರಾಮದಲ್ಲಿರುವ ನಿರುದ್ಯೋಗಿಗಳು ಹಾಗೂ ಬಡವರಿಗಾಗಿ ರೂಪಿಸಿದ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡಲೆಂದೇ ಜಾರಿ ತರಲಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಖಾತ್ರಿ ಯೋಜನೆಯಡಿ ಕೆಲಸ ಕೊಡದೇ ಕೇವಲ ಶ್ರೀಮಂತರು ಹಾಗೂ ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿ ಮಾಡಲಾಗಿದೆ. ಅಲ್ಲದೆ ಗ್ರಾಮದಲ್ಲಿನ ಕೆಲ ರಸ್ತೆಗಳನ್ನು ಕಳಪೆಯಾಗಿ ನಿರ್ಮಿಸಿದ್ದು, ಸ್ವಚ್ಛತೆ ಕಾಪಾಡದೆ ಅನೈರ್ಮಲ್ಯ ತುಂಬಿದೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದು, ಜಿಲ್ಲಾಧಿಕಾರಿ ಕೂಡಲೇ ಕ್ರಮ ಜರುಗಿಸಬೇಕೆಂದು ವೇದಿಕೆ ಒತ್ತಾಯಿಸಿತು.
ಈ ಸಂದರ್ಭದಲ್ಲಿ ವೇದಿಕೆಯ ಯಮನೂರಸಾಬ ನದಾಫ್, ರಮೇಶ ಅಬ್ಬಿಗೇರಿ, ಜ್ಞಾನೇಶ ಖೋಕಲೆ, ಭದ್ರೇಶ ಕುಸ್ಲಾಪುರ, ಮಹಾಂತೇಶ ಬೆನಕನಹಳ್ಳಿ, ನಾಗೇಶ ಅಂಗಡಿ, ಮಾರುತಿ ಈಳಿಗೇರ, ನಜೀರ ಹದ್ಲಿ, ಗೌಸುಸಾಬ ನದಾಫ್, ನಾಗರಾಜ ಹನಮಂತಗೌಡ್ರ, ವೈ.ಪಿ. ಅಡ್ನೂರ, ಮಲ್ಲೇಶ ನಡವಿನಮನಿ, ರವಿ ತಳವಾರ, ಶರಣಪ್ಪ ಬಾತಾಖಾನಿ, ಬಾಬುಸಾಬ ನದಾಫ್, ಮಲ್ಲಿಕಾರ್ಜುನ ತಡಹಾಳ, ಫಕೀರಗೌಡ ಪಾಟೀಲ, ಕಳಕಪ್ಪ ಗಜೇಂದ್ರಗಡ, ಬಾಲರಾಜ ದೊಡ್ಡಮನಿ, ಯಲ್ಲಪ್ಪ ದಿವಟರ ಇತರರಿದ್ದರು.