ಗದಗ-ಬೆಟಗೇರಿ ರೇಲ್ವೆ ನಿಲ್ದಾಣ ಎಂದು ನಾಮಕರಣಗೊಳಿಸಿ: ಬ್ಯಾಳಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 8
ಗದಗ-ಬೆಟಗೇರಿ ಒಂದು ಅವಳಿ ನಗರ ಅದರಲ್ಲೂ ಬೆಟಗೇರಿ ಕ್ಷೇತ್ರ ವಿಶಾಲವಾಗಿದೆ. ನಗರಸಭೆಯು ಗದಗ-ಬೆಟಗೇರಿ ಎಂದು ಇರುವುದರಿಂದ ಮತ್ತು ರೇಲ್ವೆ ನಿಲ್ದಾಣವು ಬೆಟಗೇರಿ ಭಾಗದಲ್ಲಿಯೇ ಇರುವುದರಿಂದ ಈಗಿರುವ ಗದಗ ರೇಲ್ವೆ ನಿಲ್ದಾಣಕ್ಕೆ ಗದಗ-ಬೆಟಗೇರಿ ರೇಲ್ವೆ ನಿಲ್ದಾಣ ಎಂದು ಹೊಸದಾಗಿ ನಾಮಕರಣವಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರ ಗಣೇಶ ಸಿಂಗ್ ಬ್ಯಾಳಿ ಒತ್ತಾಯಿಸಿದರು.
ಭಾನುವಾರ ಬೆಟಗೇರಿಯ ಮಹಾರಾಣಾ ಪ್ರತಾಪ ಸಿಂಹ್ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬೆಟಗೇರಿ ಹಾಗೂ ಅದರ ಸುತ್ತಲಿನ ಗ್ರಾಮೀಣ ಪ್ರದೇಶದವರಿಗೆ ಈಗ ಸಾಧ್ಯವಿರುವ ಟಿಕೆಟ್ ಕೌಂಟರ್‌ಗಳು ದೂರವಾಗುವವು. ಮಳೆಗಾಲದಲ್ಲಿ ರೇಲ್ವೆ ಬ್ರಿಜ್ ಬಂದಾದಾಗ ಪ್ರಾಯಾಣಿಕರಿಗೆ ತೀವ್ರ ತೊಂದರೆಯಾಗಿ ರೇಲ್ವೆ ತಪ್ಪಿಸಿಕೊಂಡಿರುವ ಅನೇಕ ಘಟನೆಗಳು ಜರುಗಿವೆ. ಆದ್ದರಿಂದ ಕುರಹಟ್ಟಿ ಪೇಟೆ ಕಡೆಗೆ ಒಂದು ಟಿಕೆಟ್ ಕೌಂಟರ್ ಕೂಡಲೇ ಪ್ರಾಂಭಿಸಬೇಕು. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವುದು.
ಓವರ್ ಬ್ರಿಡ್ಜ್ ಪೂನಾ ಅಥವಾ ಸೊಲ್ಲಾಪುರ ಮಾದರಿಯಲ್ಲಿ ನಿರ್ಮಾಣವಾಗಬೇಕು. ಜೆಟಿ ಕಾಲೇಜು ರಸ್ತೆಯಿಂದ ಕುರಹಟ್ಟಿ ಪೇಟೆ ರಸ್ತೆಗೆ ಸಂಪರ್ಕದ ಜತೆಗೆ ರೇಲ್ವೆ ಪ್ಲಾಟ್‌ಫಾರಂಗಳಿಗೂ ಸಂಪರ್ಕ ಹೊಂದಬೇಕು. ಸಾಧ್ಯವಾಗಿರುವ ಕಚ್ಚಾ ದಾರಿ ಸಮರ್ಪಕವಾಗಿಲ್ಲ ಮತ್ತು ಗೂಡ್ಸ್ ಗಾಡಿಗಳು ನಿಂತಾಗ ಅವುಗಳು ಹೋಗುವವರೆಗೆ ಸಾರ್ವಜನಿಕರು ಅಲ್ಲಿಯೆ ನಿಲ್ಲಬೇಕಾಗುತ್ತದೆ. ಬೆಟಗೇರಿ ಭಾಗ ಹಾಗೂ ಸುತ್ತಲಿನ ಗ್ರಾಮಗಳ ಪ್ರಯಾಣಿಕರು ರೇಲ್ವೆ ನಿಲ್ದಾಣಕ್ಕೆ ಹೋಗಲು ಬರಲು ಒಂದು ಪ್ರತ್ಯೇಕ ಗೇಟ್ (ಬ್ಯಾಕ್‌ಗೇಟ್) ಪ್ರಾರಂಭವಾಗಬೇಕು. ಏಕೆಂದರೆ ಸದ್ಯ ಇರುವ ಮುಂಭಾಗದ ಗೇಟನಿಂದ ಬಂದು ಬೆಟಗೇರಿಗೆ ಹೋಗಬೇಕಾದರೆ ಸುತ್ತುವರಿದು ಬರಬೇಕಾಗುತ್ತದೆ. ಈ ಕುರಿತು ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಂಸದ ಶಿವಕುಮಾರ ಉದಾಸಿ ಹಾಗೂ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಮಾಡಿಕೊಳ್ಳಲಾಗಿದೆ. ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸದ್ಯದಲ್ಲೇ ಒಂದು ಹೋರಾಟ ಸಮಿತಿ ರಚಿಸಿ ಹೋರಾಟದ ರೂಪರೇಷಗಳನ್ನು ಹಾಕಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಆರ್. ರಾಜೋಳಿ, ಭೋಜಪ್ಪ ಹೆಗಡೆ, ಶಿವಾಜಿಸಿಂಗ್ ಗಂಗಾವತಿ, ದುರ್ಗಾ ಸಿಂಗ್ ಕಾಟೇವಾಲೆ ಇತರರಿದ್ದರು.