ಮಳೆ ಅಬ್ಬರಕ್ಕೆ ತತ್ತರಿಸಿದ ರೈತರು
ಗದಗ: ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಅದರಲ್ಲಿಯೂ ರೈತರ ಬಾಳಿಗೆ ಬೆಳಕಾಗಬೇಕಾಗಿದ್ದ ರೋಹಿಣಿ ಮಳೆ ಒಮ್ಮೆಲೇ ಅಬ್ಬರಿಸಿದ್ದರಿಂದ ಬಿತ್ತನೆ ಸಿದ್ಧತೆಯಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಹ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಮಳೆಯೇ ರೈತರ ಆಧಾರ, ಆದರೆ, ಮಳೆಯಾಗುವ ರೀತಿಯಲ್ಲಿ ಮಳೆಯಾದರೆ ಯಾವುದೇ ಹಾನಿಯಾಗುವುದಿಲ್ಲ. ಅದು ರೈತರಿಗೆ ವರದಾನವಾಗುತ್ತದೆ. ಶುಕ್ರವಾರದ ಮಳೆ ಅಬ್ಬರ ಎಷ್ಟು ಜೋರಾಗಿತ್ತು ಎಂದರೆ ಹೊಲಗಳಲ್ಲಿನ ಒಡ್ಡುಗಳು, ದನಗಳನ್ನು ಕಟ್ಟಲು ನಿರ್ಮಿಸಿಕೊಂಡಿದ್ದ ಶೆಡ್‌ಗಳು ಸಂಪೂರ್ಣ ಕಿತ್ತಿದ್ದು, ರೈತರೀಗ ಮತ್ತೆ ಸಾವಿರಾರು ರುಪಾಯಿ ಖರ್ಚು ಮಾಡಿ ಅವುಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ.
ಫಲವತ್ತಾದ ಮಣ್ಣು ನಾಶ: ಹೊಲದಲ್ಲಿನ ಫಲವತ್ತಾದ ಮಣ್ಣನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವರ್ಷಾನುಗಟ್ಟಲೇ ಹೆಣಗುತ್ತಾರೆ. ಅದಕ್ಕಾಗಿ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಒಡ್ಡುಗಳು, ಬದುಗಳ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಒಮ್ಮೆಲೇ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದಲ್ಲಿ ನೀರಿನ ರಭಸಕ್ಕೆ ಒಡ್ಡು ಒಡೆದು ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಇನ್ನು ನಾಲ್ಕಾರು ವರ್ಷಗಳಿಂದ ಕೊಟ್ಟಿಗೆ ಗೊಬ್ಬರ ಹಾಕಿ ಸಿದ್ಧ್ದ ಪಡಿಸಿದ್ದ ಹೊಲಗಳೆಲ್ಲ ಮಳೆಯ ಆರ್ಭಟಕ್ಕೆ ಸಿಕ್ಕು ಕೊರಕಲಾಗಿವೆ.
ಹೆಚ್ಚಿನ ಹೊರೆ: ಇದು ಮುಂಗಾರು ಬಿತ್ತನೆ ಸಂದರ್ಭ. ಈ ವೇಳೆಯಲ್ಲಿ ರೈತರು ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರ ಸೇರಿದಂತೆ ಹಲವಾರು ಆರ್ಥಿಕ ಹೊರೆಗಳನ್ನು ಎದುರಿಸಬೇಕಾದದ್ದು ಅನಿವಾರ್ಯ. ಮಳೆಯಿಂದ ಹೊಲಗಳಲ್ಲಿನ ಒಡ್ಡುಗಳು ಒಡೆದು ಹೋಗಿದ್ದು, ಅವುಗಳನ್ನು ರಿಪೇರಿ ಮಾಡಲು ಮತ್ತಷ್ಟು ಹಣ ಖರ್ಚು ಮಾಡಬೇಕಾದ ಸ್ಥಿತಿ ಎದುರಾಗಿದೆ. ಅದರಲ್ಲಿಯೂ ಹಳ್ಳದ ದಡದಲ್ಲಿರುವ ರೈತರ ಜಮೀನುಗಳಿಗಂತೂ ಹೆಚ್ಚಿನ ಹಾನಿ ಸಂಭವಿಸಿದ್ದು, ಅವರೆಲ್ಲ ಹೊಲದಲ್ಲಿರುವ ಇನ್ನುಳಿದ ಮಣ್ಣನ್ನು ರಕ್ಷಿಸಿಕೊಳ್ಳಬೇಕಾದಲ್ಲಿ ಕೂಡಲೇ ಜೆಸಿಬಿಗಳ ಮೊರೆ ಹೋಗಬೇಕಾಗುತ್ತದೆ.
ಜಿಲ್ಲಾಡಳಿತ ಸಂಗ್ರಹಿಸಿರುವ ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ಸುರಿದ ಮಳೆ ಹಾಗೂ ಗಾಳಿಯಿಂದ 158ಕ್ಕೂ ಹೆಚ್ಚಿನ ಶೆಡ್‌ಗಳು ಪೂರ್ಣ ಜಖಂ ಆಗಿದ್ದರೆ, 34ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುಳಿವೆ. ಇನ್ನು 2 ಸಾವಿರ ಹೆಕ್ಟೇರ್ ಅಧಿಕ ಪ್ರದೇಶದಲ್ಲಿನ ಒಡ್ಡುಗಳು ಒಡೆದಿವೆ ಎಂದು ಅಂದಾಜಿಸಿದ್ದಾರೆ. ಈ ಅಂಶಗಳನ್ನು ನೋಡಿದಲ್ಲಿ ಅನ್ನದಾತನಿಗೆ ವರವಾಗಬೇಕಿದ್ದ ಮಳೆ ಮತ್ತಷ್ಟು ತೊಂದರೆ ಸೃಷ್ಟಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಮಳಿ ಚಲೋ ಆಗೈತ್ರಿ...
ಮಳಿಯಾದ ರೀತಿ ನೀಡಿದ್ರ ಹೊಲ್ದಾಗ್ ಹೆಚ್ಗಿ ಹಸಿ (ತೇವಾಂಶ) ಆಗ್ಬೇಕಿತ್ತು, ಆದ್ರ ಅಷ್ಟಾಗಿಲ್ಲ, ಎಲ್ಲೆ ಬೇಕಲ್ಲೆ ಒಡ್ಡ ಒಡ್ದ್ ಹೋಗ್ಯಾವು. ಮಳಿ ಬಿತ್ತಾಕೇನೋ ಅನುಕೂಲ ಆಗೈತ್ರಿ, ಆದ್ರ ಬಾಳಾ ಲುಕ್ಸಾನ್ ಮಾಡೈತ್ರಿ... ಬಿತ್ತಾಕ್, ಒಡ್ಡ ಹಾಕಾಕ್ ಬಳಾ ಸಮಸ್ಯೆ ಆಗತ್ರಿ... ಏನ್ ಮಾಡುದು ಮಳಿಯಪ್ಪಾ ಮಾಡಿದ್ದು ಅನುಭವಿಸಬೇಕ್ರಿ...
- ಮಂಜಪ್ಪ ದಾಟನಾಳ
ಲಿಂಗದಾಳ ಗ್ರಾಮದ ರೈತ
ಶಿವಕುಮಾರ ಕುಷ್ಟಗಿ