ದೂರು ಕೊಟ್ರೂ ಅವ್ಯವಹಾರ ತನಿಖೆ ಇಲ್ಲ: ಖಂಡನೆ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ರು. 9 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಕುರಿತು ಸಂಪೂರ್ಣ ದಾಖಲೆಯೊಂದಿಗೆ ಕಳೆದ ಮೇ 31ರಂದು ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿ ಬಂದರೂ ತನಿಖೆಗೆ ಆಗಮಿಸದಿರುವ ಅಧಿಕಾರಿಗಳ ಕ್ರಮ ಖಂಡಿಸಿ ಮತ್ತೊಮ್ಮೆ ಜಿಲ್ಲಾ ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಅವರಿಗೆ ಪಪಂ ಸದಸ್ಯ ಸಿ.ಕೆ. ಮುಳಗುಂದ, ಎಂ.ಎ. ವಲ್ಲೇಸಾಬನವರ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಅವರು ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಮನೆ, ರಾಜೀವ್ ಗಾಂಧಿ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯಡಿ ಹಾಗೂ ಆರ್ಥಿಕ ಸಹಾಯಧನದ ಚೆಕ್ ವಿತರಣೆಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರ್ಹ ಫಲಾನುಭವಿಗಳಲ್ಲದವರಿಗೆ ಸಹಾಯಧನದ ಚೆಕ್ ವಿತರಿಸಿದ್ದಲ್ಲದೇ ಪೊಲೀಸ್ ಠಾಣೆ ಹಿಂಬದಿಯಲ್ಲಿರುವ ಆಶ್ರಯ ಪ್ಲಾಟ್‌ಗಳನ್ನು ಹಣ ಪಡೆದು ಅನರ್ಹರಿಗೆ ಮಾರಾಟ ಮಾಡಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿಗೆ ಪಪಂ ಸದಸ್ಯ ಸಿ.ಕೆ. ಮುಳಗುಂದ ಮನವಿ ಸಲ್ಲಿಸಿದರಲ್ಲದೇ ತನಿಖೆ ನಡೆಸುವಲ್ಲಿ ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ಮಂಗಳವಾರ ನೂರಾರು ಫಲಾನುಭವಿಗಳೊಂದಿಗೆ ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಾರ್ಯಾಲಯದೆದುರು ಧರಣಿ ನಡೆಸಲು ಮುಂದಾಗಿದ್ದ ಫಲಾನುಭವಿಗಳು ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಭರವಸೆ ಮೇರೆಗೆ ಧರಣಿ ಕೈಬಿಟ್ಟಿದ್ದಾರೆ. ಉಪ ವಿಭಾಗಾಧಿಕಾರಿ ಗದ್ಯಾಳ ಮನವಿ ಸ್ವೀಕರಿಸಿ ಮಾತನಾಡಿ, ಪಪಂಯಲ್ಲಿ ಭ್ರಷ್ಟಾಚಾರ ಕುರಿತು ಈಗಾಗಲೇ ದೂರ ಬಂದಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಟ್ಟಣಕ್ಕೆ ಭೇಟಿ ನೀಡಿದ್ದು, ಐವರು ಸದಸ್ಯರನ್ನೊಳಗೊಂಡ ಸಮಿತಿ ನೇಮಿಸಿ ಸಮಗ್ರ ತನಿಖೆ ನಡೆಸಿ ವರದಿ ಬಂದ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು. ಪಪಂ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಶಿಸ್ತುಕ್ರಮ, ವರ್ಗಾವಣೆಗಾಗಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಜನರ ಭಾವನೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಅಧಿಕಾರಿಗಳ ನೇಮಿಸಲಾಗುವುದು.