ಬರಿದಾಗುತ್ತಿದೆ ಕೆಂಪಕೆರೆ ನೀರು
ನರಗುಂದ: ಪಟ್ಟಣದ ಜನತೆಗೆ ಕುಡಿವ ನೀರಿನ ಪೂರೈಕೆ ಮಾಡುವ ಕೆಂಪಕೆರೆಯಲ್ಲಿ ಸದ್ಯ ಕೇವಲ 8 ದಿನಗಳಿಗೆ ಮಾತ್ರ ಸಾಕಾಗುವಷ್ಟು ನೀರಿದೆ. ಅಷ್ಟರೊಳಗೆ ಕೆರೆಗೆ ನೀರು ಬರದೇ ಇದ್ದಲ್ಲಿ ನರಗುಂದ ಪಟ್ಟಣದಲ್ಲಿ ಕುಡಿವ ನೀರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಪಟ್ಟಣದ ಗುಡ್ಡದ ಪಕ್ಕದ ಸುಮಾರು 50 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ಕೆರೆ ಒಂದು ಬಾರಿ ತುಂಬಿದರೆ ನಾಲ್ಕೈದು ತಿಂಗಳುಗಳ ಕಾಲ ಪಟ್ಟಣಕ್ಕೆ ನೀರು ಪೂರೈಕೆ ಮಾಡಬಹುದು. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಕಾಲುವೆ ಮೂಲಕ ನೀರು ಹರಿಸಿ ಕೆರೆ ತುಂಬಿಸುತ್ತಿದ್ದರು. ಈ ವರ್ಷ ಮಲಪ್ರಭಾ ಜಲಾಶಯದಿಂದ ಕಾಲುವೆಗೆ ನೀರು ಬಿಡದೇ ಇರುವುದರಿಂದ ಕೆರೆಯಲ್ಲಿನ ನೀರಿನ ಸಂಗ್ರಹ ಸಂಪೂರ್ಣ ಕರಗಿ ಹೋಗಿದೆ.
ನೀರಿಗೆ ಸಮಸ್ಯೆ: ಈ ಕೆರೆ ಹಾಗೂ 25 ಬೋರ್‌ವೆಲ್‌ಗಳ ಸಹಾಯದಿಂದ ಪಟ್ಟಣದ ಎಲ್ಲ 23 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಎಲ್ಲ ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಕೆರೆ ನೀರು ಖಾಲಿಯಾದ ಬಳಿಕ ಬೋರ್‌ವೆಲ್ ನೀರು ಬಳಸುವಂತೆಯೂ ಇಲ್ಲ. ಅಲ್ಲದೆ ವಿದ್ಯುತ್ ಸಮಸ್ಯೆ ಕೂಡ ಇದೆ. ಮೂರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ.
ಪಟ್ಟಣದ ಬಸವೇಶ್ವರ ನಗರ, ಅಲ್ಲಿಭಾಯಿ, ಆಶ್ರಯ, ಜನತಾ ಕಾಲನಿಗಳಿಗೆ ವಾರದಲ್ಲಿ 1 ಬಾರಿ ಮಾತ್ರ ನೀರು ಸಿಗುತ್ತಿದೆ. ಇನ್ನು ಕೆಲವೆಡೆ ಅದೂ ಸಿಗುತ್ತಿಲ್ಲ. ಕೆರೆಯ ನೀರು ಮುಗಿದ ಮೇಲೆ ಪಟ್ಟಣದಲ್ಲಿ ನೀರಿನ ತೀವ್ರ ಕೊರತೆ ಉಂಟಾಗಲಿದೆ. ಅಲ್ಲದೆ ಈ ಕೆರೆ ಸ್ವಚ್ಛತೆಗೆ ಪುರಸಭೆ ಆಸಕ್ತಿ ತೋರುತ್ತಿಲ್ಲ. ಕೆರೆ ಸುತ್ತ ಜಾಲಿ ಗಿಡಗಳು ಬೆಳೆದಿವೆ. ತಟದ ಮೇಲೆ ನಿವಾಸಿಗಳು ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಕೊಂಚ ಆಸಕ್ತಿ ವಹಿಸಿ, ಕೆರೆ ಸುಸ್ಥಿತಿಯಲ್ಲಿಟ್ಟರೆ ನೀರಿನ ಕೊರತೆ ಉಂಟಾಗದು.
ಮಲಪ್ರಭಾ ಜಲಾಶಯದಿಂದ ಕಾಲುವೆ ಮೂಲಕ ಕೆಂಪಕೆರೆಗೆ ನೀರು ಹಾಯಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ಈಗಾಗಲೇ ಮೇಲಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಆದಷ್ಟು ಬೇಗನೆ ಕಾಲುವೆ ನೀರು ಹರಿಸಿ, ಕೆರೆ ತುಂಬಿಸಿಕೊಂಡು ಪಟ್ಟಣದ ಜನತೆಗೆ ನೀರಿನ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು.
ಪುರಸಭೆ ಮುಖ್ಯಾಧಿಕಾರಿ,
ನರಗುಂದ
-ಎಸ್.ಜಿ. ತೆಗ್ಗಿನಮನಿ