ವಚನಕಾರ್ತಿ ಬೆಳಕಿಗೆ ತರುವ ಕಾರ್ಯವಾಗಲಿ
ಲಕ್ಷ್ಮೇಶ್ವರ: ವಚನದಲ್ಲಿರುವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ 12ನೇ ಶತಮಾನದ ವಚನಕಾರರ ಶ್ರಮ ಹಾಗೂ ಜೀವನ ಸಾರ್ಥಕವಾದಂತೆ, ವಚನ ಸಾಹಿತ್ಯವು ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯವಾಗಿದ್ದು, ಶರಣರು ತಮ್ಮ ಅನುಭಾವದ ನುಡಿಗಳನ್ನು ತಮ್ಮ ವಚನಗಳಲ್ಲಿ ಹಿಡಿದಿಡುವ ಕಾರ್ಯ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಗೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ ಎಂದು ಶಿಕ್ಷಕಿ ಲಲಿತಾ ಕೆರಿಮನಿ ಹೇಳಿದರು.
ಅವರು ಪಟ್ಟಣದ ಶಾಂತಿಧಾಮ ವೃದ್ಧಾಶ್ರಮ ಕೇಂದ್ರದಲ್ಲಿ ಶನಿವಾರ ಶಿರಹಟ್ಟಿ ತಾಲೂಕು ಕಸಾಪ ಹಾಗೂ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಇವುಗಳ ಆಶ್ರಯದಲ್ಲಿ ಜರುಗಿದ ಸಾವಕ್ಕ ಉಪನಾಳ ಹಾಗೂ ಜಿ.ಎಫ್. ಉಪನಾಳ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯವು ವಚನಗಳಿಂದ ಸಂಪದ್ಭರಿತವಾಗಿದೆ. 12ನೇ ಶತಮಾನದಲ್ಲಿ ಬಾಳಿಹೋದ ಸುಮಾರು 33 ವಚನಕಾರ್ತಿಯರು ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆ ನೀಡಿದ್ದಾರೆ. ಕೇವಲ ಬೆರಣಿಕೆಯಲ್ಲಿರುವ ವಚನಕಾರ್ತಿಯರು ಮಾತ್ರ ಇಂದು ಗೋಚರಿಸುತ್ತಿರುವುದು ನೋವಿನ ಸಂಗತಿ. ಇನ್ನೂ ಹಲವಾರು ವಚನಕಾರ್ತಿಯರು ಕೇವಲ 2-3 ವಚನಗಳನ್ನು ರಚಿಸಿದ್ದರೂ ಅವರ ವಚನಗಳನ್ನು ಲೆಕ್ಕದಲ್ಲಿ ತೆಗೆದುಕೊಳ್ಳದೆ ಅದರಲ್ಲಿರುವ ಅರ್ಥ ಗಾಂಭಿರ್ಯವನ್ನು ಗಣನೆಗೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡುವುದರ ಜತೆಯಲ್ಲಿ ಅಜ್ಞಾತವಾಗಿ ಉಳಿದಿರುವ ವಚನಕಾರ್ತಿಯರ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಎಸ್.ಎಫ್. ಆದಿ ಅವರು ಮಾಜಿ ಶಾಸಕ ಗೂಳಪ್ಪ ಉಪನಾಳರ ಜೀವನ ಆದರ್ಶ ಕುರಿತು ಉಪನ್ಯಾಸ ನೀಡಿದರು. ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ, ಗದಗ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ, ಎಸ್.ಐ. ಯಾಳಗಿ, ಜಿ. ಕೊಟ್ರೇಶ ಮಾತನಾಡಿದರು. ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ನೂಲಿನ ಗಿರಣಿಯ ನೂತನ ಅಧ್ಯಕ್ಷ ಪುಲಕೇಶಿ ಉಪನಾಳರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಈಚೆಗೆ ನಿಧನರಾದ ಶಿರಹಟ್ಟಿ ತಾಲೂಕು ಕಸಾಪದ ಮಾಜಿ ಅಧ್ಯಕ್ಷ ಎಚ್.ಎಚ್. ಬಳ್ಳಾರಿಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗದಗ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿ.ವಿ. ಕೆರಿಮನಿ, ವಸಂತರಾವ್ ಜೋಷಿ, ಬಸಣ್ಣ ಉಪನಾಳ, ಎನ್.ವೈ. ಕುರಿ, ಜೆ.ಎಸ್. ರಾಮಶೆಟ್ಟರ, ಪ್ರಕಾಶ ಉಪನಾಳ, ನಾಗರಾಜ ಹಣಗಿ. ಪ್ರಮೀಳಾ ಸಾಂಗ್ಲೀಕರ, ಫಕ್ಕೀರಪ್ಪ ಸೋಮಕ್ಕನವರ, ಭೀಕ್ಷಾವರ್ತಿ ಹಿರೇಮಠ, ವಾಲಿ ಹಾಗೂ ಕದಳಿ ವೇದಿಕೆಯ ಅನೇಕ ಮಹಿಳಾ ಸದಸ್ಯರು ಹಾಜರಿದ್ದರು.