ವಲಸೆ ಮಕ್ಕಳ ನಿಖರ ಮಾಹಿತಿ ತಿಳಿದುಕೊಳ್ಳಿ: ಬುರಡಿ
ಶಿರಹಟ್ಟಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗಳತ್ತ ಕರೆ ತನ್ನಿ ಎನ್ನುವ ಶಿಕ್ಷಣ ಇಲಾಖೆಯ ಸಮೀಕ್ಷಾ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಪಾಲಕರೊಂದಿಗೆ ವಲಸೆ ಹೋದ ಮಕ್ಕಳ ಬಗ್ಗೆ ನಿಖರವಾದ ಮಾಹಿತಿ ಪಡೆಯುವಲ್ಲಿ ಶಿಕ್ಷಕರು ಮುಂದಾಗಬೇಕು. ಶಾಲೆಬಿಟ್ಟ ಮಕ್ಕಳ ಬಗ್ಗೆ ತಾಯಂದಿರಲ್ಲಿ ಅರಿವು ಮೂಡಿಸುವ ಕಾರ್ಯ ಮೊದಲು ನಡೆಯಬೇಕು. ಗ್ರಾಮಾಂತರ ಪ್ರದೇಶಗಳಲ್ಲಿನ ಪಾಲಕರು ತಮ್ಮ ಮಕ್ಕಳಿಗೆ ಕೃಷಿ, ಕುರಿ ಕಾಯುವುದು ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಚಿಂತಿಸುವ ಅಗತ್ಯವಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜೆ.ಬಿ. ಗುಡಿ ಮಾತನಾಡಿ, 6ರಿಂದ 14 ವಯಸ್ಸಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಜೊತೆಗೆ ಇತರೆ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ಸಮುದಾಯ, ಸಂಘದ ಪದಾಧಿಕಾರಿಗಳು ಸಹಕಾರ ನೀಡಬೇಕು ಎಂದರು. ಗ್ರಾಮೀಣ ಕೋಟಾದಡಿಯಲ್ಲಿ ನವೋದಯ ಹಾಗೂ ಮೊರಾರ್ಜಿ ವಸತಿ ಶಾಲೆಗೆ ಸೇರಲು ಹೆಸರು ಮಾತ್ರ ಸರ್ಕಾರಿ ಶಾಲೆಯಲ್ಲಿ ಹಚ್ಚುವುದು. ತರಬೇತಿ ಮತ್ತೊಂದೆಡೆ ಪಡೆಯುವ ಮಕ್ಕಳನ್ನು ಗುರುತಿಸಿ ಸರ್ಕಾರಿ ಶಾಲೆಯಲ್ಲಿಯೇ ತರಬೇತಿ ನೀಡುತ್ತಿರುವುದರ ಬಗ್ಗೆ ಶಿಕ್ಷಕರು ತಿಳಿಸುವ ಜತೆಗೆ ಸರ್ಕಾರಿ ಶಾಲೆಯಲ್ಲಿ ಕಲಿಯುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಸಭೆಗೆ ಗೈರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಮುಖ್ಯವಾಹಿನಿಗೆ ತರುವ ಸಲುವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಆಹ್ವಾನಿಸಲಾಗಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಕಾರ್ಮಿಕ ನೀರಿಕ್ಷಕರು, ಸಮಾಜ ಕಲ್ಯಾಣ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್, ಆರೋಗ್ಯ ಇತರ ಇಲಾಖೆ ಹಿರಿಯ ಅಧಿಕಾರಿಗಳೇ ಪೂರ್ವ ಭಾವಿ ಸಭೆಗೆ ಹಾಜರಾಗದೇ ಇರುವುದು ಎದ್ದು ಕಾಣುತ್ತಿತ್ತು.
ಜಿ.ಆರ್. ಸರ್ಜಾಪುರ, ಬಿ.ಎಸ್. ಈಳಗೇರ, ಎಂ.ಕೆ. ಲಮಾಣಿ, ಗಿರೀಶ ಕೋಡಬಾಳ, ಎಸ್.ಬಿ. ಹೊಸೂರ, ಸುರೇಶ ಸರ್ಜಾಪುರ, ಎಚ್.ಆರ್. ಬೆನಹಾಳ ಇತರರಿದ್ದರು.