ಸಚಿವ ಸದಾನಂದಗೌಡಗೆ ನಾಳೆ ರೇಲ್ವೆ ಕ್ರಿಯಾ ಸಮಿತಿ ಮನವಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 10
ಜಿಲ್ಲೆಗೆ ದೊರೆಯಬೇಕಿರುವ ಪ್ರಯಾಣಿಕ ರೇಲ್ವೆ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜೂ. 12ರಂದು ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೇಲ್ವೆ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಕೆ.ಎಂ. ಮಹೇಶ್ವರಸ್ವಾಮಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಬಳ್ಳಾರಿಗೆ ದೊರಯಬೇಕಿರುವ ರೇಲ್ವೆ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರಿಗೆ ಮನವಿ ಸಲ್ಲಿಸಲು ಬಳ್ಳಾರಿ, ಹ.ಬೊ.ಹಳ್ಳಿ, ಹೊಸಪೇಟೆ ಮತ್ತು ರಾಜ್ಯಾದ್ಯಂತ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿಯೋಗದೊಂದಿಗೆ ದೆಹಲಿಗೆ ತೆರಳಲಾಗುವುದು. ಜೂ. 11ರಂದು ಕರ್ನಾಟಕ ಭವನದಲ್ಲಿ ರಾಜ್ಯದ ಎಲ್ಲ ಸಂಸದರೊಂದಿಗೆ ಚರ್ಚಿಸಿ, ಜೂ. 12ರಂದು ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಂತ್ರಿಕ ದೋಷ ಸರಿಪಡಿಸಿ: ಹೊಸಪೇಟೆ-ಬಳ್ಳಾರಿ-ಬೆಂಗಳೂರು ಮಧ್ಯೆ ನೂತನ ಹಗಲು ಇಂಟರ್‌ಸಿಟಿ (ಜನಶತಾಬ್ಧಿ) ರೈಲನ್ನು ಆರಂಭಿಸಬೇಕು. ಈ ಹಿಂದಿನ ಮಲ್ಲಿಕಾರ್ಜುನ ಖರ್ಗೆಯವರ ಲೇಖಾನುದಾನದಲ್ಲಿ ಮಂಡನೆಯಾದ ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಪ್ರದೇಶಗಳಿಗೆ ರೇಲ್ವೆ ಸಂಪರ್ಕಕ್ಕೆ ಸರ್ವೆ ಆದೇಶವನ್ನು ಮುಂದುವರಿಸಬೇಕು. ನೂತನ ಬ್ರಾಡ್‌ಗೇಜ್ ನಿರ್ಮಾಣ ಕಾಮಗಾರಿ ಆರಂಭವಾಗಿರುವ ರಾಯದುರ್ಗ-ಪಾವಗಡ-ತುಮಕೂರು ರೈಲು ಮಾರ್ಗದ ಕೆಲಸವನ್ನು ತ್ವರಿತವಾಗಿ ಮುಗಿಸಬೇಕು. ಹೊಸಪೇಟೆ ಬಳಿಯ ಗುಂಡಾ ಫಾರೆಸ್ಟ್ ಭಾಗದಲ್ಲಿನ ತಾಂತ್ರಿಕ ದೋಷ ಸರಿಪಡಿಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.
ಮುನಿರಾಬಾದ್-ರಾಯಚೂರು ನೂತನ ಬ್ರಾಡ್‌ಗೇಜ್ ನಿರ್ಮಾಣಕ್ಕೆ ತ್ವರಿತ ಕ್ರಮಕೈಗೊಳ್ಳಬೇಕು. ಜಿಲ್ಲೆಯ ಕೆಲ ರೇಲ್ವೆಗೇಟ್‌ಗಳಿಗೆ ಮೇಲ್ಸೇತುವೆ ನಿರ್ಮಿಸಬೇಕು. ಬಳ್ಳಾರಿಯನ್ನು ನೈರುತ್ಯ ರೇಲ್ವೆ ವಲಯಕ್ಕೆ ಸೇರ್ಪಡೆಗೊಳಿಸಬೇಕು. ಹೊಸದಾಗಿ ರೇಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸಲು ಮನವಿ ಸಲ್ಲಿಸಲಾಗುವುದು ಎಂದರು.
ಎರಡು ದಿನಕ್ಕೆ ವಿಸ್ತರಿಸಿ: ಹೊಸಪೇಟೆ-ಬಳ್ಳಾರಿ-ಚಿತ್ರದುರ್ಗ ಮಾರ್ಗವಾಗಿ ಮಂಗಳೂರು, ಮೈಸೂರಿಗೆ ನೂತನ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು. ಸದ್ಯ ಚಿತ್ರದುರ್ಗ ಮಾರ್ಗವಾಗಿ ಈಗಿರುವ ಪ್ಯಾಸೆಂಜರ್ ರೈಲನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಪ್ರತ್ಯೇಕವಾಗಿ ಓಡಿಸಬೇಕು. ವಾರಕ್ಕೆ ಒಮ್ಮೆ ಸಂಚರಿಸುವ ವಿವಿಧ ರೈಲುಗಳನ್ನು ಎರಡು ದಿನಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ವಿವರಿಸಿದರು.