ಅರ್ಧಕ್ಕೆ ನಿಂತ ಏತ ನೀರಾವರಿ
ಕನ್ನಡಪ್ರಭ ವಾರ್ತೆ, ನರಗುಂದ, ಜೂ. 11
ಮಲಪ್ರಭಾ ಜಲಾಶಯ ಬಲದಂಡೆ ಕಾಲುವೆಗಳಿಗೆ ಹೊಂದಿಕೊಂಡಿರುವ ಕೆಲವು ಗ್ರಾಮಗಳಿಗೆ ಕಾಲುವೆ ನೀರು ತಲುಪದಿರುವುದರಿಂದ ರೈತರ ಜಮೀನುಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಏತ ನೀರಾವರಿ ಮೂಲಕ ನೀರು ದೊರಕಿಸಬೇಕೆಂದು ಸರ್ಕಾರ ರು. 25.5 ಕೋಟಿ ವಿಶೇಷ ಪ್ಯಾಕೇಜ್ ಮೂಲಕ ಯೋಜನೆ ಪ್ರಾರಂಭಿಸಿದ್ದು, ಇಂದಿಗೂ ಯೋಜನೆ ಅರ್ಧಕ್ಕೆ ನಿಂತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಮುಗಿಯದ ಕಾಮಗಾರಿ: ತಾಲೂಕಿನ ಕೆಲವು ಕೆಳ ಭಾಗದ ರೈತರಿಗೆ ಕಾಲುವೆ ನೀರು ತಲುಪದಿರುವ ಹಿನ್ನೆಲೆಯಲ್ಲಿ ಬನಹಟ್ಟಿ, ಖಾನಾಪುರ, ರಡ್ಡೇರ ನಾಗನೂರ, ಕೊಣ್ಣೂರು, ಕುರ್ಲಗೇರಿ, ಸುರಕೋಡ ಗ್ರಾಮಗಳಿಗೆ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಜಮೀನುಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಈ ಎಲ್ಲ ಗ್ರಾಮಗಳನ್ನು ಪ್ಯಾಕೇಜ್ ಮಾಡಿಕೊಂಡು ರು. 25.5 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ಬನಹಟ್ಟಿ, ಖಾನಾಪುರ, ಸುರಕೋಡ, ರಡ್ಡೇರ ನಾಗನೂರ, ಕೊಳಚಿ, ಕುರ್ಲಗೇರಿ ಗ್ರಾಮಗಳ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಕೊಣ್ಣೂರು ಗ್ರಾಮದ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತಿದ್ದು, ರೈತರಿಗೆ ನುಂಗಲಾರದ ತುತ್ತಾಗಿದೆ.
ತುಕ್ಕು ಹಿಡಿಯುತ್ತಿರುವ ಪೈಪ್ಗಳು: ಕೊಣ್ಣೂರು ಭಾಗದ ಏತ ನೀರಾವರಿ ಯೋಜನೆಯ ಪೈಪ್ಗಳು 8 ವರ್ಷದಿಂದ ಹಾಗೆಯೇ ಬಿದ್ದಿದ್ದು, ತುಕ್ಕು ಹಿಡಿಯುತ್ತವೆ. ಏಕೆ ನೀರಾವರಿ ನಿಗಮದ ಅಧಿಕಾರಿಗಳು ಈ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿ ಪೂರ್ಣಗೊಳ್ಳುವುದರೊಳಗಾಗಿ ಪೈಪ್ಗಳು ತುಕ್ಕು ಹಿಡಿಯುವ ಹಂತ ತಲುಪಿದ್ದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.
ಏತ ನೀರಾವರಿ ಕಾಮಗಾರಿಯನ್ನು ಎಸ್ಪಿಎಂಎಲ್ ಎನ್ನುವ ಕಂಪನಿ ಕೆಲಸ ಮಾಡುತ್ತಿದ್ದು, ಈ ಭಾಗದಲ್ಲಿನ ರೈತರು ತಮ್ಮ ಜಮೀನುಗಳಲ್ಲಿರುವ ಮರಗಳಿಗೆ ಹಾನಿಯಾಗುತ್ತಿದ್ದು, ಅದಕ್ಕಾಗಿ ಹೆಚ್ಚಿನ ಪರಿಹಾರ ಕೇಳಿದ್ದಾರೆ. ಆದರೆ, ಸರ್ಕಾರದ ನಿಯಮಗಳ ಪ್ರಕಾರ ಪರಿಹಾರ ನೀಡಿದ್ದಾರೆ. ಆದರೂ ರೈತರು ನಮಗೆ ಹೆಚ್ಚಿನ ಹಣ ಬೇಕೆಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ.
- ರವಿ, ಕೊಣ್ಣೂರು ವಿಭಾಗದ ನೀರಾವರಿ ನಿಗಮದ ಅಧಿಕಾರಿ
ಆ ಭಾಗದಲ್ಲಿ ಪ್ರತಿವರ್ಷ ಕಾಲುವೆ ನೀರು ಸಿಗದಿರುವುದಕ್ಕೆ ನೂರಾರು ರೈತರ ಜಮೀನಗಳಲ್ಲಿನ ಬೆಳೆ ನಾಶವಾಗುತ್ತಿತ್ತು. ಅದಕ್ಕೆ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರೈತರ ಸಭೆ ನಡೆಸಿ ರೈತರೊಂದಿಗೆ ಕೂಡಲೇ ಚರ್ಚಿಸಿ ಶೀಘ್ರ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು.
- ವಿಜಯ ಕುಲಕರ್ಣಿ,
ಕಳಸಾ ಬಂಡೂರಿ ಯುವ ಹೋರಾಟ ಸಮಿತಿ ಅಧ್ಯಕ್ಷ
-ಎಸ್.ಜಿ. ತೆಗ್ಗಿನಮನಿ