ಎಪಿಎಂಸಿ ಕಟ್ಟಡ ಉದ್ಘಾಟನೆಯಿಲ್ಲ
ಶರಣು ಸೊಲಗಿ
ಮುಂಡರಗಿ: ಪಟ್ಟಣದ ಹೊರ ವಲಯದಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರ್ಮಾಣಗೊಂಡು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿರುವ ನೂತನ ಎಪಿಎಂಸಿ ಮಾರುಕಟ್ಟೆ ಕಟ್ಟಡದ ಉದ್ಘಾಟನೆ ಭಾಗ್ಯ ಇಲ್ಲವೇ ಎಂದು ಸಾರ್ವಜನಿಕರು ಹಾಗೂ ತಾಲೂಕಿನ ರೈತರು ನೊಂದು ನುಡಿಯುವ ಮೂಲಕ ಸಂಬಂಧಪಟ್ಟ ಇಲಾಖೆಗೆ ಹಿಡಿಶಾಪ ಹಾಕುತ್ತಿದೆ.
ಮುಂಡರಗಿ ಪಟ್ಟಣದ ಘಟ್ಟಿರಡ್ಡಿಹಾಳ ಹಾಗೂ ಗದಗ ರಸ್ತೆ ಪಕ್ಕದಲ್ಲಿ ಸುಮಾರು ರು. 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಎಪಿಎಂಸಿ ಕಟ್ಟಡದ ಉದ್ಘಾಟನೆ ಅನೇಕ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಒಂದೂವರೆ ವರ್ಷದ ಹಿಂದೆ ಸಂಬಂಧಪಟ್ಟ ಇಲಾಖೆ ಸಚಿವರು, ರಾಜ್ಯಪಾಲರನ್ನು ಆಹ್ವಾನಿಸಿ ಉದ್ಘಾಟನೆ ಮಾಡಿಸುವುದಾಗಿ ಸ್ವತಃ ಎಪಿಎಂಸಿ ಅಧ್ಯಕ್ಷರೇ ಹೇಳುತ್ತಿದ್ದರು. ಆದರೆ, ಕಟ್ಟಡ ಇದುವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಅನೈತಿಕ ಚಟುವಟಿಕೆಗಳ ತಾಣ: ನೂತನ ಎಪಿಎಂಸಿ ಕಟ್ಟಡವು ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವುದರಿಂದ ಇದುವರೆಗೂ ಅಲ್ಲಿ ರೈತರ ಯಾವುದೇ ವ್ಯಾಪಾರ ಚಟುವಟಿಕೆಗಳು ನಡೆಯದಿರುವುದರಿಂದ ರಾತ್ರಿ ಸಮಯ ಇಲ್ಲಿನ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಕಟ್ಟಡ ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಯದಿರುವುದರಿಂದ ತಕ್ಷಣ ಉದ್ಘಾಟನೆಗೊಂಡರೆ ಇಂತಹ ಚಟುವಟಿಕೆಗಳಿಗೆ ಅವಕಾಶ ದೊರೆಯುವುದಿಲ್ಲ ಎನ್ನುವುದು ಸಾರ್ವಜನಿಕರ ಮತ್ತು ರೈತರ ಅಂಬೋಣ.
ಕಳೆದ ವರ್ಷ ಉದ್ಘಾಟನೆಗೆ ಸಿದ್ಧಗೊಳಿಸಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ವಿಳಂಬವಾಗಿತ್ತು. ಈ ವರ್ಷ ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆಯಿಂದಾಗಿ ವಿಳಂಬವಾಗುತ್ತಿದೆ. ಕಟ್ಟಡಕ್ಕೆ ವಿದ್ಯುತ್ ಸರಬರಾಜು ಕಾರ್ಯ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಂದಿಗಳ ಕಾಟಕ್ಕೆ ಅನೇಕ ಬಾರಿ ಪುರಸಭೆಗೆ ತಿಳಿಸಲಾಗಿದೆ.
- ಎಂ.ಬಿ. ಚಬನೂರ,
ಎಪಿಎಂಸಿ ಕಾರ್ಯದರ್ಶಿ
ನೂತನ ಎಪಿಎಂಸಿ ಮಾರುಕಟ್ಟೆಯಲ್ಲಿ ಅನೇಕ ಕಾಮಗಾರಿಗಳು ಪೂರ್ಣಗೊಳ್ಳಬೇಕಿವೆ. ಆವರಣದಲ್ಲಿ ಸಂಪೂರ್ಣವಾಗಿ ಕಸ, ಮುಳ್ಳು ಗಿಡಗಳು ಬೆಳೆದು ನಿಂತಿವೆ. ಖರೀದಿದಾರರು ಹಾಗೂ ದಲ್ಲಾಳಿಗಳಿಗೆ ಆವರಣದಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ಹಿಂದೆ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಎಲ್ಲ ಖರೀದಿದಾರರ ಸಭೆ ಕರೆದು ನೂತನ ಎಪಿಎಂಸಿ ಹತ್ತಿರ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ನಬಾರ್ಡ್ನಿಂದ ಪಿಎಲ್ಡಿ ಬ್ಯಾಂಕ್ ಮೂಲಕ ಶೇ. 4ರ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಎಲ್ಲ ಖರೀದಿದಾರರಿಗೂ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಸಾಲ ಕೊಡಿಸಬೇಕು. ಎಲ್ಲ ಸೌಲಭ್ಯಗಳನ್ನು ಒದಗಿಸಿ ನೂತನ ಮಾರುಕಟ್ಟೆ ಉದ್ಘಾಟನೆ ಮಾಡಿಸಬೇಕು.
- ಹೇಮಗಿರೀಶ ಹಾವಿನಾಳ, ಹಮ್ಮಿಗಿ ಕ್ಷೇತ್ರದ ಜಿಪಂ ಸದಸ್ಯ
ಸರಿಯಾದ ವ್ಯವಸ್ಥೆ ಇಲ್ಲ
ಈಗಾಗಲೇ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಹಂದಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರೈತರು ಹೊಲದಿಂದ ತಂದ ಫಸಲಿನಲ್ಲಿ ಅರ್ಧ ಭಾಗ ಹಂದಿಗಳಿಗೆ ಆಹುತಿಯಾಗುತ್ತಿವೆ. ನಿಯಂತ್ರಣಕ್ಕೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಮನವಿಗೆ ಬೆಲೆ ಇಲ್ಲದಂತಾಗಿದೆ. ರೈತರು ನಿತ್ಯ ಹಂದಿಗಳ ಕಾಟದಿಂದ ಬೇಸತ್ತಿದ್ದಾರೆ. ಹಳೆ ಮಾರುಕಟ್ಟೆಗೆ ಬರುವ ರೈತರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಮೂತ್ರಾಲಯವಿಲ್ಲ. ಹೀಗೆ ಹುಡುಕುತ್ತ ಹೋದರೆ ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.