ನಾಳೆಯಿಂದ ಪಂಚಾಕ್ಷರಿ, ಪುಟ್ಟರಾಜ ಶ್ರೀ ಸ್ಮರಣೆ
ಗದಗ: ಪಂ. ಪಂಚಾಕ್ಷರಿ ಗವಾಯಿಗಳವರ 70ನೇ ಹಾಗೂ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಚತುರ್ಥ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವು ಜೂ. 13ರಿಂದ 17ರ ವರೆಗೆ ಜರುಗಲಿದೆ ಎಂದು ವೀರೇಶ್ವರ ಪುಣ್ಯಾಶ್ರಮ ಗದಗ-ದಾವಣಗೆರೆ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.
ಬುಧವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜೂ. 13ರಂದು ಸಂಜೆ 5ಕ್ಕೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ಜರುಗಲಿದ್ದು, ಶ್ರೀಶೈಲ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಚಳಗೇರಿ ಹಿರೇಮಠದ ವಿರುಪಾಕ್ಷಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಅಡ್ನೂರು ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು ನೇತೃತ್ವ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ಜಿ.ಎಸ್. ಗಡ್ಡದ್ದೇವರಮಠ ಇತರರಿರುವರು. ಹಲವು ಮಹನಿಯರನ್ನು ಸನ್ಮಾನಿಸಲಾಗುವುದು.
14ರಂದು ಸಂಜೆ 5ಕ್ಕೆ ಕೀರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿ ಜರುಗಲಿದ್ದು, ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಿವಾನಂದ ಶ್ರೀಗಳು ಅಧ್ಯಕ್ಷತೆ ವಹಿಸುವರು. ರಾತ್ರಿ 10.30ಕ್ಕೆ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯಸಂಘದಿಂದ ಕೊರವಂಜಿ ನಾಟಕ ಪ್ರದರ್ಶನಗೊಳ್ಳಲಿದೆ.
15ರಂದು ಸಂಜೆ 5ಕ್ಕೆ ಕೀರ್ತನ ಸಮ್ಮೇಳನ ಜರುಗಲಿದ್ದು, ಮುಂಡರಗಿಯ ಡಾ. ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು. ಬೂದೀಶ್ವರ ಶ್ರೀಗಳು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡ್ರ, ಸಂಗಣ್ಣ ಕರಡಿ, ಶಾಸಕ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಭಾಗವಹಿಸುವರು. ನಂತರ ಯೋಗ ಪ್ರದರ್ಶನ ಜರುಗಲಿದೆ.
16ರಂದು ಸಂಜೆ 5ಕ್ಕೆ ಶಿವಾನುಭವಗೋಷ್ಠಿ ಜರುಗಲಿದ್ದು, ತೋಂಟದ ಡಾ. ಸಿದ್ಧಲಿಂಗ ಶ್ರೀ ಸಾನ್ನಿಧ್ಯ ವಹಿಸುವರು. ಡಾ. ವಿಜಯಮಹಾಂತ ಶ್ರೀಗಳು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ವಿಪ ಸದಸ್ಯ ವೀರಣ್ಣ ಮತ್ತಿಕಟ್ಟಿ, ಸಂಸದ ಬಿ. ಶ್ರೀರಾಮುಲು, ಶಿವಕುಮಾರ ಉದಾಸಿ, ವಿಪ ಸದಸ್ಯ ಬಸವರಾಜ ಹೊರಟ್ಟಿ ಪಾಲ್ಗೊಳ್ಳುವರು. ಹಲವು ಮಹನಿಯರಿಗೆ ಹಾನಗಲ್ಲ ಕುಮಾರಶ್ರೀ ಪ್ರಶಸ್ತಿ ವಿತರಣೆ, ಪುಟ್ಟರಾಜ ಕೃಪಾ ಗ್ರಂಥ ಬಿಡುಗಡೆ ಮತ್ತು ವಿಶ್ವರತ್ನ ಸಿಡಿಯ ಧ್ವನಿಸುರುಳಿ ಬಿಡುಗಡೆಗೊಳಿಸಲಾಗುವುದು.
17ರಂದು ವಿಶೇಷ ಕಾರ್ಯಕ್ರಮ ಧರ್ಮೋತ್ತೇಜಕ ಮಹಾಸಭೆ ಜರುಗಲಿದ್ದು, ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧರಾಜಯೋಗಿಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಚಿವ ಜಿ.ಎಂ. ಸಿದ್ದೇಶ, ಮಾಜಿ ಸಿಎಂ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಶಿವರಾಜ ಸಜ್ಜನರ, ಜಿ.ಎಸ್. ಪಾಟೀಲ, ವಿಶ್ವನಾಥ ಪ್ರಸಾದ ಪಾಲ್ಗೊಳ್ಳುವರು. ಪಂ. ಪುಟ್ಟರಾಜ ಶ್ರೀಗಳು ರಚಿಸಿರುವ ಗುರು ವಚನಪ್ರಭ ಗ್ರಂಥದ (ದ್ವಿತೀಯ ಮುದ್ರಣ) ಬಿಡುಗಡೆ ಜರುಗಲಿದೆ. ಸಂಜೆ ಜೇಷ್ಠ ಬಹುಳ ಪಂಚಮಿಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ 10.30ಕ್ಕೆ ಸ್ವರ ಸಮಾರಾಧನಾ ಸಮಾರೋಪ ಸಮಾರಂಭ ಜರುಗಲಿದೆ ಎಂದರು. ಟ್ರಸ್ಟ್ನ ಕಾರ್ಯದರ್ಶಿ ಬಸವರಾಜ ಹಿಡ್ಕಿಮಠ, ಪ್ರಕಾಶ ಬಸರಿಗಿಡದ ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ, ಚನ್ನವೀರಯ್ಯ ಬಾಳಿಹಳ್ಳಿಮಠ, ಪ್ರಭುಲಿಂಗಯ್ಯ ಹಿರೇಮಠ, ಶಿವರುದ್ರಪ್ಪ ಇಟಗಿ ಇತರರಿದ್ದರು.