ಪ್ರವೇಶದಲ್ಲಿ ರಿಯಾಯ್ತಿ ನೀಡಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 11
ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಿಸಿರುವುದನ್ನು ಸರ್ಕಾರ ತಕ್ಷಣ ಕೈಬಿಟ್ಟು ಪ್ರವೇಶಾತಿಯಲ್ಲಿ ವಿನಾಯತಿ ನೀಡಲು ಮುಂದಾಗದಿದ್ದಲ್ಲಿ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಸ್ಎಫ್ಐ ಸಂಘಟನೆ ಮುಖಂಡರು ಸೋಮವಾರ ವಿಶೇಷ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆ ಮುಖಂಡ ಶಿವಾಜಿ ಗಡ್ಡದ ಮಾತನಾಡಿ, ಸರ್ಕಾರ ಯಾವುದೇ ಮಾನದಂಡ ಅನುಸರಿಸದೆ ಕಳೆದ ಬಾರಿಗಿಂತ ಮೂರು ಪಟ್ಟು ಪ್ರವೇಶ ಶುಲ್ಕ ಹೆಚ್ಚಿಸಿರುವುದರಿಂದ ಪದವಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಭಾರಿ ಆಘಾತವನ್ನುಂಟು ಮಾಡಿದೆ. ಜತೆಗೆ ಗ್ರಂಥಾಲಯ, ಭೋಧನಾ, ಕ್ರೀಡಾ ಹಾಗೂ ಪ್ರಯೋಗಾಲಯ ಶುಲ್ಕಗಳಿಗೆ ವಿನಾಯತಿ ನೀಡುವ ಬದಲು ಶುಲ್ಕ ತುಂಬಲು ಆದೇಶಿಸುವ ಮೂಲಕ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಯಾವುದೇ ವಿದ್ಯಾರ್ಥಿ ಸಂಘಟನೆಗಳ ಜತೆ ಚರ್ಚಿಸದೇ ಏಕಾಏಕಿ ಪ್ರವೇಶ ಶುಲ್ಕ ಹೆಚ್ಚಿಸಿರುವುದರಿಂದ ಎಸ್ಸಿ.ಎಸ್ಟಿ, ಓಬಿಸಿ, ಹಾಗೂ ಎಲ್ಲ ಬಡ ವಿದ್ಯಾರ್ಥಿಗಳು ತೀವ್ರ ತೊಂದರೆಗೀಡಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಿಂದ ಸರ್ಕಾರ ವಿಶೇಷ ಕಾಳಜಿ ವಹಿಸಿ ಹೆಚ್ಚಿಸಿರುವ ಪ್ರವೇಶ ಶುಲ್ಕ ವಸೂಲಾತಿ ಆದೇಶ ಹಿಂಪಡೆಯದಿದ್ದರೆ ಎಸ್ಎಫ್ಐ ರಾಜ್ಯಾದ್ಯಾಂತ ಬೀದಿಗಿಳಿದು ಹೋರಾಟ ಮಾಡುವುದರ ಜತೆಗೆ ರಾಜ್ಯದ ಎಲ್ಲ ವಿವಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ದಾವಲಸಾಬ ತಾಳಿಕೋಟಿ, ಪ್ರಕಾಶ ಹೆಳವರ, ಆಸೀಫ ಮುಲ್ಲಾ, ದ್ಯಾಮವ್ವ ಡಮ್ಮೂರ, ಲಕ್ಷ್ಮೀ ಮತ್ತಾರಿ, ಜ್ಯೋತಿ ಬಂದನಾಥ, ಅಕ್ಬರ ನದಾಫ್, ಬಸವರಾಜ ಸವಣೂರ, ಪ್ರದೀಪ ಹಲ್ಲೂರ ಎಚ್ಚರಿಸಿದರು. ವಿಶೇಷ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಎನ್.ಎಚ್. ನದಾಫ್ ಮನವಿ ಸ್ವೀಕರಿಸಿದರು.