ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಕ್ತರಾಗದ ಬಾಲಕಾರ್ಮಿಕರು

Vishwanath S
Updated On : 12 Jun 2014, 11:14 am

ಗದಗ: ಬಾಲಕಾರ್ಮಿಕ ಪದ್ಧತಿಯಿಂದಾಗಿ ದೇಶದ ಭವಿಷ್ಯ ಬರೆಯುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಭಾಷಣ ಮಾಡುವ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಾಕಷ್ಟಿದ್ದಾರೆ. ಆದರೆ, ವಾಸ್ತವದಲ್ಲಿ ಈ ಅನಿಷ್ಟ ಪದ್ಧತಿ ಹೋಗಲಾಡಿಸುವ ನಿಟ್ಟಿನಲ್ಲಿ ದಿನಾಚರಣೆಯ ದಿನದಂದು ಕಾರ್ಯಕ್ರಮ ಆಚರಿಸಿ ಕೈ ತೊಳೆದುಕೊಳ್ಳುವ ಅಧಿಕಾರಿಗಳು ಅವಳಿ ನಗರದಲ್ಲಿದ್ದಾರೆ.
ಗದಗ ನಗರದ ಸ್ಲಂ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ನಿತ್ಯ ಹಲವಾರು ಮಕ್ಕಳು ಇಂದಿಗೂ ಬಿಕ್ಷಾಟನೆ ಮಾಡುತ್ತಿದ್ದರೆ. ಹಲವಾರು ಮಕ್ಕಳು ಹೋಟೆಲ್, ಗ್ಯಾರೇಜ್ಗಳಲ್ಲಿ ಅಧಿಕಾರಿಗಳ ಕಣ್ಮುಂದೆಯೇ ಕೆಲಸ ಮಾಡುವುದು ಸಾಮಾನ್ಯವಾಗಿದೆ.
ಕಾಯ್ದೆ ಏನು ಹೇಳುತ್ತೆ: ಬಾಲಕಾರ್ಮಿಕ ಕಾಯ್ದೆ 1986ರ ಪ್ರಕಾರ ಮಗು 6ರಿಂದ 14 ವರ್ಷದೊಳಗಿದ್ದ ಮಕ್ಕಳು ಕಾರ್ಮಿಕರಾಗಿ ಕೆಲಸ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಮಾತ್ರ ಇದು ಸಮರ್ಪಕವಾಗಿ ಜಾರಿಯಾಗಿಲ್ಲ. ಇಲ್ಲಿವರೆಗೂ ಒಬ್ಬರೇ ಒಬ್ಬ ಬಾಲಕಾರ್ಮಿಕರನ್ನು ಗುರುತಿಸಿ, ಅವರಿಗೆ ಪುನರ್ವಸತಿ ಕಲ್ಪಿಸಿ ಅವರ ಶಿಕ್ಷಣಕ್ಕೆ ನಾಂದಿ ಹಾಡುವ ಪ್ರಯತ್ನವನ್ನು ಜಿಲ್ಲಾ ಬಾಲಕಾರ್ಮಿಕ ಯೋಜನಾ ಅಧಿಕಾರಿಗಳು ಮಾಡಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಈ ಅನಿಷ್ಟ ಪದ್ಧತಿ ಜಾರಿಯಲ್ಲಿದೆ.
ಕೃಷಿ ಕ್ಷೇತ್ರದಲ್ಲಿ ಹೆಚ್ಚು: ಬಾಲಕಾರ್ಮಿಕರು ಹೆಚ್ಚಾಗಿ ಕಂಡು ಬರುತ್ತಿರುವುದು ಕೃಷಿ ಕ್ಷೇತ್ರದಲ್ಲಿ. ಗದಗ ಜಿಲ್ಲೆ ಆರ್ಥಿಕ ಹಿನ್ನೆಲೆಯೇ ಕೃಷಿಯಾಗಿರುವುದರಿಂದ ಹಾಗೂ ಕೃಷಿ ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಳಕೆಯಾಗುತ್ತಿರುವುದು ಇಲ್ಲಿಯೇ. ಎರಡೇ ಸ್ಥಾನದಲ್ಲಿರುವ ಗ್ಯಾರೇಜ್ಗಳಲ್ಲಿ ಸಹಿತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗದಗ ಮುಖ್ಯ ಬಸ್ ನಿಲ್ದಾಣ, ಲಕ್ಷ್ಮೇಶ್ವರ, ಗದಗ ರೇಲ್ವೆ ನಿಲ್ದಾಣದಲ್ಲಿ ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದರು. ಅಧಿಕಾರಿಗಳು ಗಮನಿಸುತ್ತಿಲ್ಲ.
ಕಡಿವಾಣ ಎಂದು?
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ಅಧಿಕಾರಿಗಳಿಗೆ ನೆನಪಾಗುವುದು ಬಾಲಕಾರ್ಮಿಕ ದಿನಾಚರಣೆಯಂದು ಮಾತ್ರ. ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಿಂದಿನ ದಿನದಂದು ಎಲ್ಲ ಪತ್ರಿಕೆಗಳಿಗೆ ಒಂದು ಲೇಖನ ಕಳಿಸಿ ಕೈತೊಳೆದುಕೊಂಡು ದಿನಾಚರಣೆಯಂದು ಗಡದ್ದಾಗಿ ಭಾಷಣ ಮಾಡಿ, ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿ, ದಿನವೂ ತಪ್ಪದೇ ಶಾಲೆಗೆ ಬರುವ ಮಕ್ಕಳನ್ನೇ ಕರೆದುಕೊಂಡು ಕಾರ್ಯಕ್ರಮ ನಡೆಸಿ ಮುಗಿಸಿ ಬಿಡುತ್ತಾರೆ. ಇಲಾಖೆ ಅಧಿಕಾರಿಗಳಿಗೆ ಬಾಲಕಾರ್ಮಿಕರು ನೆನಪಾಗುವುದು ಮುಂದಿನ ವರ್ಷದ ಬಾಲ ಕಾರ್ಮಿಕ ದಿನಾಚರಣೆಯಂದೇ.
ಬಾಲಕಾರ್ಮಿಕರ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಸಂಪೂರ್ಣ ಹೋಗಲಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಮುದಾಯ ಹೆಚ್ಚಿನ ಕಾಳಜಿ ವಹಿಸಬೇಕು. ಮುಖ್ಯವಾಗಿ ಪಾಲಕರು ತಮಗೆ ಎಷ್ಟೇ ತೊಂದರೆಗಳಿದ್ದರೂ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕಳಿಸದೇ ಅವರಿಗೆ ಶಿಕ್ಷಣ ನೀಡುವತ್ತ ಗಮನ ನೀಡಬೇಕು.
- ವಿಜಯ ಮುಳಗುಂದ, ಸಾಮಾಜಿಕ ಹೋರಾಟಗಾರ


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement