ಈರುಳ್ಳಿ ಬೀಜದ ಕೃತಕ ಅಭಾವ
ಗದಗ: ಗದಗ ಜಿಲ್ಲೆಯಲ್ಲೀಗ ಈರುಳ್ಳಿ ಬೀಜದ ಕೊರತೆ ಕಾಡುತ್ತಿದೆ. ಪ್ರತಿ ಗ್ರಾಮಕ್ಕೆ ತೆರಳಿದರೂ ಈರುಳ್ಳಿ ಬೀಜಗಳೇ ಸಿಗುತ್ತಿಲ್ಲ ಎನ್ನುವುದು ರೈತರು ಮಾತು ಸಾಮಾನ್ಯ. ಜಿಲ್ಲೆಯಲ್ಲಿ ಈರುಳ್ಳಿ ಬೀಜದ ದಾಸ್ತಾನಿದೆ. ಆದರೆ, ಅದನ್ನು ಸಂಗ್ರಹ ಮಾಡಿರುವವರು ಸೃಷ್ಟಿಸುತ್ತಿರುವ ಕೃತಕ ಅಭಾವ. ಇದರಿಂದಾಗಿ ರೈತರು ಮುಂಗಾರು ಆರಂಭದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಕಳೆದ ಸಾಲಿನಲ್ಲಿ ಈರಳ್ಳಿ ಅತ್ಯುತ್ತಮ ಬೆಲೆ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದ ಈರುಳ್ಳಿ ಬಿತ್ತನೆಗೆ ರೈತರು ಆಸೆ ಪಡುತ್ತಾರೆ. ಅದಕ್ಕಾಗಿ ಉತ್ತಮ ಬೀಜಗಳನ್ನೇ ಕೊಳ್ಳಬೇಕು ಎನ್ನುವ ಹಂಬಲ ಹೊಂದಿರುತ್ತಾರೆ. ಇನ್ನು ರೋಹಿಣಿ ಮಳೆ ಕೆಲವೆಡೆ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಈರುಳ್ಳಿ ಬಿತ್ತನೆಗೆ ರೈತರು ಸಿದ್ಧತೆಯಲ್ಲಿದ್ದು, ಪರಿಸ್ಥಿತಿಯ ಲಾಭವನ್ನು ಬೀಜ ಸಂಗ್ರಹ ಮಾಡಿರುವವರು ಪಡೆಯುತ್ತಿದ್ದಾರೆ. ಬೀಜಗಳು ಖಾಲಿಯಾಗುತ್ತಿವೆ ಕೂಡಲೇ ಖರೀದಿಸಿ, ಇಲ್ಲವಾದಲ್ಲಿ ಸಿಗುವುದಿಲ್ಲ ಎನ್ನುವ ಮೂಲಕ ಹೆಚ್ಚುವರಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.
1 ಲಕ್ಷ ಹೆ. ಬಿತ್ತನೆ ಸಾಧ್ಯತೆ: ಕಳೆದ ಸಾಲಿನಲ್ಲಿ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಈ ಬಾರಿ ಬಿತ್ತನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. 1.5 ಲಕ್ಷ ಹೆಕ್ಟೇರ್ ಪ್ರದೇಶದವರೆಗೂ ಈರುಳ್ಳಿ ಬಿತ್ತನೆ ಸಾಧ್ಯತೆ ಇದೆ. ಪ್ರತಿ ಎಕರೆಗೆ 2 ಕೆಜಿ ಈರುಳ್ಳಿ ಬೀಜ ಬೇಕಾಗುವುದರಿಂದ (ಎರಡು ಬದಿಯಿಂದ ಬಿತ್ತನೆ ಮಾಡಿದಲ್ಲಿ) ಮಳೆಯೂ ಆಶಾದಾಯಕ ವಾತಾವರಣ ನಿರ್ಮಿಸಿರುವುದರಿಂದ ರೈತರು ಗುಣಮಟ್ಟದ ಈರುಳ್ಳಿ ಬೀಜಕ್ಕಾಗಿ ಹಾತೊರೆಯುತ್ತಿದ್ದಾರೆ.
ಹೆಚ್ಚಿನ ಹಣಕ್ಕೆ ಮಾರಾಟ: ಗದಗ ಜಿಲ್ಲೆಯ ಭೂಮಿ ಗುಣಧರ್ಮ, ಮಳೆ ಆಧಾರಿಸಿ ಹೆಚ್ಚಿನ ಲಾಭ ತರುವುದು ನಮ್ಮಲ್ಲಿನ ಜವಾರಿ ಈರುಳ್ಳಿ ತಳಿ ಮಾತ್ರ. ಇದೇ ಬೀಜಗಳು ಕಳೆದ ಒಂದು ವಾರದ ಹಿಂದೆ (ಮಳೆಯಾಗುವ ಪೂರ್ವದಲ್ಲಿ) ರು. 350-450ರ ವರೆಗೆ ಮಾರಾಟವಾಗುತ್ತಿತ್ತು. ಆದರೀಗ ಪ್ರತಿ ಕೆಜಿ ಬೀಜಕ್ಕೆ ರು. 600ಗೆ ಮಾರಾಟವಾಗುತ್ತಿದೆ. ಇನ್ನು ಪಕ್ಕದ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಗರ್ವಾ ಬೀಜ ರು. 700-900ರ ವರೆಗೆ, ಇಂಡೋ ಅಮೆರಿಕ ಹೆಸರಿನ ಈರುಳ್ಳಿ ಬೀಜ ಕೆಜಿಗೆ ರು. 1000-1100ರ ವರೆಗೆ ಮಾರಾಟವಾಗುತ್ತಿದೆ.
ಪರಿಸ್ಥಿತಿಯನ್ನು ಮನಗಂಡಿರುವ ಕೆಲ ಖಾಸಗಿ ವ್ಯಕ್ತಿಗಳು ಜಿಲ್ಲೆಯ ಗ್ರಾಮಗಳಿಗೆ ತೆರಳಿ, ಇದು ಚಳ್ಳಕೇರಿಯ ಬೀಜ, ಇದು ತೆಲಗಿ ಬೀಜ ಎಂದು ಹೇಳಿ ರೈತರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆ ಬೀಜಗಳು ಪ್ರಮಾಣಿಕೃತವಾಗಿವೆಯೇ, ಅವು ಇದೇ ವರ್ಷದ ಬೀಜಗಳಾ ಎನ್ನುವ ಬಗ್ಗೆ ಪರಿಶೀಲನೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ರೈತರು ಸಹಜವಾಗಿ ಮೋಸಕ್ಕೆ ಒಳಗಾಗುತ್ತಾರೆ. ಈ ಕುರಿತು ಕೃಷಿ ಇಲಾಖೆ ಗಮನ ನೀಡಬೇಕು ಮತ್ತು ಗುಣಮಟ್ಟ ಈರುಳ್ಳಿ ಬೀಜ ಮಾರಾಟಕ್ಕೆ ವ್ಯವಸ್ಥಿತ ವೇದಿಕೆ ಕಲ್ಪಿಸಬೇಕು.
- ಯಶವಂತ ಪಾಟೀಲ, ಮಲ್ಲಪ್ಪ ಬಾಗಲಕೋಟಿ,
ಸಂಗಪ್ಪ ಜಾಡರ, ಜಿಲ್ಲೆಯ ವಿವಿಧ ಗ್ರಾಮಗಳ ರೈತರು