ವೀರ ಬಾಬಾಸಾಹೇಬ ಪುಣ್ಯಸ್ಮರಣೆ: ಮಾಲಾರ್ಪಣೆಗೆ ಅಡ್ಡಿ
ಕನ್ನಡಪ್ರಭ ವಾರ್ತೆ, ನರಗುಂದ, ಜೂ. 12
1857-58ರಲ್ಲಿ ನರಗುಂದ ಸಂಸ್ಥಾನದ ದೊರೆ ವೀರಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಲು ಬಂದ ಪುರಸಭೆಯವರಿಗೆ ಎಬಿವಿಪಿ ವಿದ್ಯಾರ್ಥಿಗಳು ಅಡ್ಡಿಪಡಿಸಿದ ಘಟನೆ ಗುರುವಾರ ಜರುಗಿತು.
ವಿದ್ಯಾರ್ಥಿ ಮುಖಂಡ ಸಂಜು ನಲವಡೆ ಮಾತನಾಡಿ, ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರಿಸುತ್ತಿದ್ದಾರೆ ಎಂದು ಎಬಿವಿಪಿ ವಿದ್ಯಾರ್ಥಿಗಳು ಆರೋಪಿಸಿದರು.
ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡವುದಿಲ್ಲ ಎಂದಾಗ ಎಬಿವಿಪಿ ಮತ್ತು ಪುರಸಭೆ ಸದಸ್ಯರ ಮಧ್ಯ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಎಸ್. ರಾಜಶೇಖರ ಮಾತನಾಡಿ, ಈ ಸದ್ಯ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆಯಿದೆ. ಅದಕ್ಕೆ ನಾವು ನೀತಿ ಸಂಹಿತೆ ಮುಗಿದ ತಕ್ಷಣ ಪುರಸಭೆಯ ಸಭೆ ಕರೆದು ಉತ್ಸವ ಮಾಡುವ ಕುರಿತು ಮತ್ತು ಪುರಸಭೆಯ ಸ್ಥಳಾಂತರ ಕುರಿತು ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳತ್ತೇವೆ ಎಂಬ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದು ಮಾಲಾರ್ಪಣೆ ಮಾಡಲು ಅನುವು ಮಾಡಿದರು.
ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳೆ, ಸದ್ಯಸರಾದ ಉಮೇಶ ಕುಡನ್ನವರ, ಚಂದ್ರು ಪವಾರ, ಪ್ರಕಾಶ ಪಟ್ಟಣಶಟ್ಟಿ, ಸಾವಿತ್ರಿ ಹಟ್ಟಿ, ಸಿ.ಬಿ. ಪಾಟೀಲ, ಎಸ್.ಆರ್. ಪಾಟೀಲ, ರಫೀಕ ಧಾರವಾಡ, ಸುರೇಶ ಸವದತ್ತಿ, ನಾಗಪ್ಪ ನವಲಗುಂದ, ಎಬಿವಿಪಿ ವಿದ್ಯಾರ್ಥಿಗಳಾದ ನಂದೀಶ ಮಠದ, ಮಂಜು ಪಲ್ಲೆದ, ಸಿದ್ದು ಹೂಗಾರ, ಗೌರೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.