ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅವನತಿ ಅಂಚಿನಲ್ಲಿ ತಾಮ್ರಗುಂಡಿ ಕೆರೆ

Vishwanath S
Updated On : 14 Jun 2014, 11:49 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 13
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಹಾಳಾಗುತ್ತಿವೆ ಹಾಗೂ ಭೂಗಳ್ಳರಿಗೆ ಬಲಿಯಾಗುತ್ತಿವೆ. ಕೆಲ ಕೆರೆಗಳನ್ನು ದುರಸ್ತಿಗೊಳಿಸಿದರೆ ಮತ್ತೆ ಜೀವಕಳೆ ಬರುತ್ತವೆ. ಇದಕ್ಕೊಂದು ಉತ್ತಮ ಉದಾಹರಣೆ ಮುಂಡರಗಿ ತಾಲೂಕಿನ ತಾಮ್ರಗುಂಡಿ ಕೆರೆ.
1948-49ರಲ್ಲಿ ಕಟ್ಟಲ್ಪಟ್ಟ ಈ ಕೆರೆಯು ತಾಮ್ರಗುಂಡಿ, ಬರದೂರು ಮತ್ತು ಮುಂಡರಗಿ ಭಾಗದ 602 ಎಕರೆ ಭೂಮಿ ನೀರಾವರಿ ಮಾಡುವ ಸಾಮರ್ಥ್ಯ ಇದೆ. ಈ ಭೂಮಿಗೆ ಕೆರೆಯ ನೀರೇ ಗತಿ. ಇಲ್ಲಿಯ ರೈತರಿಗೆ ಮತ್ತು ಈ ಕೆರೆಗೆ ಅಷ್ಟು ಅನ್ಯೊನ್ಯ ಸಂಬಂಧ. ಆದರೆ, ಈ ಕೆರೆ 2003 ಮತ್ತು 2007ರಲ್ಲಿ ಬಿದ್ದ ಭಾರಿ ಮಳೆಗೆ ಒಡೆದದ್ದರಿಂದ ಇಲ್ಲಿವರೆಗೂ ದುರಸ್ತಿಭಾಗ್ಯ ಕಾಣದೆ ಕೆರೆ ಅವನತಿಯ ಅಂಚಿಗೆ ತಲುಪಿದೆ.
ಈ ಕೆರೆಗೆ ಬರುವ ನೀರು ಕಪ್ಪತಗುಡ್ಡದ ಖನಿಜ ಮಿಶ್ರಿತ ಭೂಮಿಯಲ್ಲಿ ಹಾಯ್ದು ಬರುತ್ತದೆ. ಆದ್ದರಿಂದ ಇಲ್ಲಿಯ ನೀರು ಬೆಳೆಗಳಿಗೆ ಹಾಯಿಸಿದರೆ ಬೆಳೆಗಳು ಹುಲಸಾಗಿ ಬರುತ್ತಿತ್ತು. ಆದರೆ, ಇದೀಗ ಈ ಕೆರೆ ದುರಸ್ತಿ ಮಾಡದ್ದರಿಂದ ಸುಮಾರು 602 ಎಕರೆ ಪ್ರದೇಶ ನೀರಾವರಿ ಕೊರತೆಯಿಂದ ಬರಡಾಗಿದೆ. ಈ ಭೂಮಿ ಮೊದಲಿನಂತೆ ಮತ್ತೆ ಚೈತನ್ಯ ಪಡೆಯಬೇಕಾದರೆ ಈ ತಾಮ್ರಗುಂಡಿ ಕೆರೆ ದುರಸ್ತಿ ಅತಿ ಅವಶ್ಯವಾಗಿದೆ ಎನ್ನುವುದು ಗ್ರಾಮಸ್ಥರ ಅಂಬೋಣ.
7 ವರ್ಷವಾದರೂ ದುರಸ್ತಿ ಕಂಡಿಲ್ಲ: ತಾಮ್ರಗುಂಡಿ ಕೆರೆ 1987ರಲ್ಲಿ ಒಡೆದು ನಂತರ ದುರಸ್ತಿ ಕಂಡಿತ್ತು. ನಂತರ 2003ರಲ್ಲಿ ಮತ್ತೆ ಒಡೆದು ಮತ್ತೊಮ್ಮೆ ದುರಸ್ತಿ ಆಗಿತ್ತು. ಈ ದುರಸ್ತಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದರಿಂದ ಮತ್ತೆ 2007ರಲ್ಲಿ ಒಡೆದಿದೆ. 7 ವರ್ಷವಾದರೂ ದುರಸ್ತಿ ಭಾಗ್ಯ ಕಂಡಿಲ್ಲ. ಇಲ್ಲಿ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಮತ್ತು ಕಳಕಪ್ಪ ಬಂಡಿ ಈ ಪ್ರದೇಶವನ್ನು ಪ್ರತಿನಿಧಿಸಿದ್ದರೂ ಈ ಕೆರೆ ದುರಸ್ತಿ ಕಾಣದೆ ಹಾಳಾಗುತ್ತಿರುವುದು ಅನೇಕರಿಗೆ ನೋವು ತಂದಿದೆ. ಪ್ರಸ್ತುತ ಶಾಸಕರಾಗಿರುವ ಜಿ.ಎಸ್. ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಚ್.ಕೆ. ಪಾಟೀಲ ಸುಮಾರು 602 ಎಕರೆ ಪ್ರದೇಶಕ್ಕೆ ನೀರಾವರಿ ನೀಡುವ ಈ ಕೆರೆ ದುರಸ್ತಿಗೊಳಿಸಿ ಎಲ್ಲ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಸಾರ್ವಜನಿಕರ ಒತ್ತಾಯ.
13ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಈ ಕೆರೆಯ ದುರಸ್ತಿಗೆ ರು. 1.97 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು 3 ವರ್ಷದಿಂದ ಹೇಳುತ್ತಾ ಬಂದಿದ್ದರೂ ಕೆರೆಯು ದುರಸ್ತಿಯಾಗಿಲ್ಲ. ಮಳೆಯಾದಾಗಲೆಲ್ಲಾ ನೀರು ಸಂಪೂರ್ಣ ಪೋಲಾಗುತ್ತಿದೆ. ಗ್ರಾಮದಲ್ಲಿ ಗ್ರಾಮಸಭೆ ನಡೆಯಲಿ, ಜನಪ್ರತಿನಿಧಿಗಳು ಬರಲಿ, ಜಿಲ್ಲಾಧಿಕಾರಿಗಳು ಬರಲಿ, ಯಾರೇ ಬಂದರೂ ಇಲ್ಲಿಯ ಜನರ ಪ್ರಥಮ ಬೇಡಿಕೆಯೇ ಕೆರೆ ದುರಸ್ತಿಯ ಬೇಡಿಕೆ. ಆದರೂ ದುರಸ್ತಿ ಮಾತ್ರ ಆಗಿಲ್ಲ. ಇನ್ನಾದರೂ ಕೆರೆ ದುರಸ್ತಿ ಮಾಡುತ್ತಾರಾ? ಕಾದು ನೋಡಬೇಕು.
ಅನೇಕ ವರ್ಷದಿಂದ ಕೆರೆ ದುರಸ್ತಿಗೆ ರೈತರು ಒತ್ತಾಯಿಸಿದ್ದರೂ ಈವರೆಗೂ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮುಂಡರಗಿ ತಾಲೂಕಿನ ಬಗ್ಗೆ ಒಂದೂ ಮಾತನಾಡಿಲ್ಲ. ಒಮ್ಮೆಯೂ ಇತ್ತಕಡೆ ಬಂದಿಲ್ಲ. ಸಾವಿರಾರು ಕೋಟಿ ರು. ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಒಂದು ಬಾರಿಯೂ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿಲ್ಲ. ಚುನಾವಣೆ ಬಂದಾಗೊಮ್ಮೆ ಮುಂಡರಗಿ ತಾಲೂಕಿಗೆ ಬಂದುಹೋಗುವ ಇವರಿಗೆ ಮುಂಬರುವ ದಿನಗಳಲ್ಲಿ ಇವರಿಗೆ ಘೇರಾವ್ ಹಾಕುವ ಮೂಲಕ ಇವರ ವರ್ತನೆ ಖಂಡಿಸಲಾಗುವುದು.
-ವೈ.ಎನ್. ಗೌಡರ, ತಾಲೂಕು ಅಭಿವೃದ್ಧಿ ಹೋರಾಟವೇದಿಕೆ ಅಧ್ಯಕ್ಷ


-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement