ಎಸ್‌ಎಂಎಸ್ ನೋಂದಣಿ ಕಡ್ಡಾಯ: ಪ್ರತಿಕೃತಿ ದಹನ
ಗದಗ: ಪಡಿತರ ಚೀಟಿಗಳನ್ನು ಹೊಂದಿರುವ ಎಲ್ಲ ಕುಟುಂಬಗಳು ಎಸ್‌ಎಂಎಸ್ ನೋಂದಣಿ ಮಾಡಿಕೊಳ್ಳಬೇಕೆಂದು ನೇರ ಸಬ್ಸಡಿ ಜಾರಿಗೆ ತರಲು ಆಹಾರ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ ಖಂಡಿಸಿ ಶುಕ್ರವಾರ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಗಾಂಧಿ ವೃತ್ತದಲ್ಲಿ ರಾಜ್ಯ ಆಹಾರ ಇಲಾಖೆ ಸಚಿವ ದಿನೇಶ ಗೂಂಡುರಾವ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಏಜೆಂಟರು ಜನರಿಂದ ಎಸ್‌ಎಂಎಸ್ ಮಾಡಿಕೊಡಲು ಸಾಕಷ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸ್ಲಂ ಮತ್ತು ಬಡ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಅನಕ್ಷರಸ್ಥರಿಗೆ ಎಸ್‌ಎಂಎಸ್ ಮಾಡಲು ಬರುವುದಿಲ್ಲ. ಆಹಾರ ಇಲಾಖೆ ಆದೇಶ ವಿಲ್ಲದಿದ್ದರೂ ನಗರದ ಕೆಲವೊಂದು ಪಡಿತರ ಅಂಗಡಿಕಾರರು ಜೂ. 15ರೊಳಗೆ ಎಸ್‌ಎಂಎಸ್ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ತಿಂಗಳು ನಿಮಗೆ ಆಹಾರಧಾನ್ಯ ನೀಡುದಿಲ್ಲ ಎನ್ನುತ್ತಿದ್ದಾರೆ. ಶೀಘ್ರ ರಾಜ್ಯ ಸರ್ಕಾರ ಪಡಿತರ ಚೀಟಿಗಳ ಎಸ್‌ಎಂಎಸ್ ನೋಂದಣಿ ಕೈಬಿಡಬೇಕು ಎಂದು ಆಗ್ರಹಿಸಿದರು. ಅಶೋಕ ಮ್ಯಾಗೇರಿ, ಅಶೋಕ ಕುಡತಿನ್ನಿ ಇತರರಿದ್ದರು.